
ಕರೂರು ಆಧಾರ್ ಕೇಂದ್ರದಲ್ಲಿ ಜನಜಂಗುಳಿ : ತೆಕ್ಕಲಕೋಟೆ ಕೇಂದ್ರ ಒಂದು ವರ್ಷದಿಂದ ಸ್ಥಗಿತ
ಸಿರುಗುಪ್ಪ : ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಸಾರ್ವಜನಿಕರು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರದಿ ಕಾಯ್ದಿರಿಸಲು ಬೆಡ್‌ಶೀಟ್, ಚಪ್ಪಲಿ, ಚೀಲ, ಕಲ್ಲು ಹಾಗೂ ಆಧಾರ್ ಕಾರ್ಡ್‌ಗಳನ್ನೇ ‘ಟೋಕನ್’ ಆಗಿ ಇಡುವಂತಾಗಿದೆ.
ತಾಲೂಕಿನ ಕರೂರು ಗ್ರಾಮದ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರಕ್ಕೆ ಕರೂರು ವ್ಯಾಪ್ತಿಯ 18 ಗ್ರಾಮಗಳ ಜನರು ಆಧಾರ್ ಸಂಬಂಧಿತ ಸೇವೆಗಾಗಿ ಬರುತ್ತಿದ್ದಾರೆ. ಪ್ರತಿ ಸೋಮವಾರ 250ರಿಂದ 300 ಟೋಕನ್‌ಗಳನ್ನು ನೀಡಲಾಗುತ್ತಿದ್ದು, ಟೋಕನ್ ಪಡೆಯಲು ಗ್ರಾಮಸ್ಥರು ಬೆಳಗಿನ ಜಾವ 6 ಗಂಟೆಯಿಂದಲೇ ಕೇಂದ್ರದ ಬಳಿ ಜಮಾಯಿಸುತ್ತಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತೆಕ್ಕಲಕೋಟೆ ನಾಡಕಚೇರಿಯ ಆಧಾರ್ ಕೇಂದ್ರವು ಕಳೆದ ಒಂದು ವರ್ಷದಿಂದ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿರುವುದರಿಂದ ತೆಕ್ಕಲಕೋಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕರೂರು ಹಾಗೂ ಸಿರಿಗೇರಿ ಭಾಗದ ಆಧಾರ್ ಕೇಂದ್ರಗಳತ್ತ ತೆರಳುವಂತಾಗಿದೆ. ನೆರೆಯ ಆಂಧ್ರಪ್ರದೇಶದಿಂದಲೂ ಜನರು ಆಗಮಿಸುತ್ತಿರುವುದರಿಂದ ಕೇಂದ್ರಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬರುತ್ತಿದೆ.
ಬಿಸಿಲಿನಲ್ಲಿ ದೀರ್ಘಕಾಲ ನಿಲ್ಲಲು ಸಾಧ್ಯವಾಗದ ಸಾರ್ವಜನಿಕರು ತಮ್ಮ ಸರದಿ ತಪ್ಪದಂತೆ ನೆಲದ ಮೇಲೆ ಬೆಡ್‌ಶೀಟ್, ಚಪ್ಪಲಿ, ಚೀಲ, ಕಲ್ಲು ಹಾಗೂ ಆಧಾರ್ ಕಾರ್ಡ್‌ಗಳನ್ನು ಇಟ್ಟು ಸ್ಥಳ ಕಾಯ್ದಿರಿಸುತ್ತಿದ್ದಾರೆ.
ಆಧಾರ್ ಕೇಂದ್ರದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ನೀಡುವ ಉದ್ದೇಶದಿಂದ ಟೋಕನ್ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
‘ತೆಕ್ಕಲಕೋಟೆ ಆಧಾರ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು . ಸಮಸ್ಯೆಯನ್ನು ಎರಡು–ಮೂರು ದಿನಗಳಲ್ಲಿ ಪರಿಹರಿಸಿ ಕೇಂದ್ರವನ್ನು ಪುನರಾರಂಭಿಸಲಾಗುವುದು’
- ತಹಶೀಲ್ದಾರ್ ಗೌಸಿಯಾ ಬೇಗಂ
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















