ರಾಯಚೂರು/ಸಿಂಧನೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ವಿದ್ಯಾರ್ಥಿಗಳನ್ನು ಬೆಳೆಸಿ ಎನ್ನುವ ಘೋಷವಾಕ್ಯ ಕೇವಲ ಮಾತಿಗಷ್ಟೇ ಸೀಮಿತವಾದಂತಿದೆ.ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅವರಿಗೆ ಉತ್ತಮವಾದ ಶಿಕ್ಷಣವನ್ನು ಕೊಡಲು ಸರ್ಕಾರ ಹಲವಾರು ಯೋಜನೆಗಳು ಹಮ್ಮಿಕೊಂಡಿದೆ.
ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಹಲವಾರು ಗ್ರಾಮಗಳಿಗೆ ಇನ್ನೂ ಶಾಲೆಯೇ ಮಂಜೂರಾಗದೇ ಇರುವುದು ಬಡ ವಿದ್ಯಾರ್ಥಿಗಳ ದೌರ್ಭಾಗ್ಯವೇ ಸರಿ.ಅಂತಹ ಗ್ರಾಮಗಳಲ್ಲಿ ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೆ ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಆರಂಭವಾಗಿ 67 ವರ್ಷಗಳು ಕಳೆದರೂ ಇನ್ನೂ ಪ್ರೌಢಶಾಲೆ ಮಂಜೂರಾಗದೇ ಇರುವುದು ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವಂತೆ ಮಾಡಿದೆ.
ಕೆ.ಹೊಸಹಳ್ಳಿ,ಪಕ್ಕದ ಗ್ರಾಮಗಳಾದ ನಾಗಲಿಂಗೇಶ್ವರ ಕ್ಯಾಂಪ್,ಸತ್ಯನಾರಾಯಣ ಕ್ಯಾಂಪ್,ಗ್ರಾಮಗಳಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಮವಾಗಿ ಒಟ್ಟು 195,90,85 ಮಕ್ಕಳಿದ್ದು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 20,12,18 ಆಗಿರುತ್ತದೆ.
ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ತುರವಿಹಾಳ,ಸಿಂಧನೂರು ನಂತಹ ನಗರಗಳಿಗೆ ಸುಮಾರು 20 ರಿಂದ 30 ಕಿಲೋಮೀಟರ್ ತೆರಳಬೇಕಾದ ಅನಿವಾರ್ಯತೆ ಇರುವುದರಿಂದ ಬಡತನವಿರುವ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ.
ಮೂರು ಗ್ರಾಮಗಳು ಸೇರಿ 950 ಕುಟುಂಬಗಳಿದ್ದು 6500 ಕ್ಕೂ ಅಧಿಕ ಜನಸಂಖ್ಯೆ ಇದೆ. ಇವರೆಲ್ಲರೂ ಈಗಾಗಲೇ ಸುಮಾರು ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರುಗಳಿಗೆ ನೀಡಿಯೂ ಯಾವುದೇ ಪ್ರಯೋಜನವಾಗಿಲ್ಲ.
ಸುಸಜ್ಜಿತ ಕಟ್ಟಡ,ವಿಶಾಲವಾದ ಆಟದ ಮೈದಾನವಿರುವ ಕೆ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2023- 24ನೇ ಸಾಲಿನಲ್ಲಿ 8ನೇ ತರಗತಿಯನ್ನು.ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನು ಆರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.