ಹನೂರು:ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜ.3 ರಂದು ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲೂಕು ಸಮಿತಿ ವತಿಯಿಂದ ತಾಲೂಕಿನ ನಾಲ್ ರೋಡ್ ನಲ್ಲಿ ರಸ್ತೆ ತಡೆ ಚಳುವಳಿ ಹಮ್ಮಿಕೊಂಡಿದ್ದೇವೆ ಎಂದು ಕನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ತಿಳಿಸಿದ್ದಾರೆ.
ಈ ಬಗ್ಗೆ ಗ್ರೇಡ್ 2 ತಹಸಿಲ್ದಾರ್ ಧನಂಜಯ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು ತಾಲೂಕಿನ ರಾಮಪುರ ಹೋಬಳಿಗೆ ಸೇರಿದ ಮಾರ್ಟಳ್ಳಿ,ಬಿದರಳ್ಳಿ,ವೆಟ್ಟಿಕಾಡು, ಪೆದ್ದನ ಪಾಳ್ಯ,ಕೂಡ್ಲೂರು,ಸಂದನ ಪಾಳ್ಯ,ಜಲ್ಲಿ ಪಾಳ್ಯ ಹಾಗೂ ಸುತ್ತಮುತ್ತ ಹಳ್ಳಿಗಳ ರೈತರು ಅನುಭವಿಸುತ್ತಿರುವ ಹದಗೆಟ್ಟ ರಸ್ತೆ,ಜಮೀನುಗಳಿಗೆ ಪೋಡು ಸಮಸ್ಯೆ,ನಿರಂತರ ಜ್ಯೋತಿ ಸರಬರಾಜು ನಿಲುಗಡೆ ಹಾಗೂ ಪಂಪ್ ಸಟ್ ಗಳಿಗೆ ಹಗಲಿನಲ್ಲಿ ಏಳು ತಾಸು ಗುಣಮಟ್ಟದ ವಿದ್ಯುತ್ ನೀಡುವುದು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಯಾವುದೇ ವ್ಯವಸ್ಥೆ ಇಲ್ಲದೆ ಇರುವುದು,ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಆರೋಗ್ಯ ಸೇವೆ ಇಲ್ಲದಿರುವುದು,ಕೊಟ್ಟಿಗೆ ಗೊಬ್ಬರವನ್ನು ಹೊರರಾಜ್ಯಕ್ಕೆ ಸಾಗಣೆ ಮಾಡದಂತೆ ತಡೆಯಬೇಕು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ,ಅರಣ್ಯ ಇಲಾಖೆ,ಲೋಕೋಪಯೋಗಿ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಚಳುವಳಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಯಂ ಸದಸ್ಯರಾದ ರವಿ ನಾಯ್ಡು,ರೈತ ಮುಖಂಡರುಗಳಾದ ಜಾನ್ಸನ್, ದೊರೆಸ್ವಾಮಿ ನಾಯ್ಡು,ಅರ್ಪುದರಾಜ್,ಕಾಸಿಗೌಡ, ಪಳೆನಿಶೆಟ್ಟಿ,ಹುಚ್ಚಯ್ಯ ಇನ್ನಿತರರು ಇದ್ದರು.
ವರದಿ:ಉಸ್ಮಾನ್ ಖಾನ್