ಬಾಗಲಕೋಟೆ:ರಬಕವಿ-ಬನಹಟ್ಟಿ/ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಕಾನೂನು ಪದವೀಧರರ ತರಬೇತಿ ಭತ್ಯೆಗಾಗಿ 2023-2024 ನೇ ಸಾಲಿಗೆ ಅರ್ಹ ಮುಸ್ಲಿಂ, ಕ್ರಿಶ್ಚಿಯನ್,ಜೈನ್,ಬೌದ್ಧ,ಪಾರ್ಸಿ ಹಾಗೂ ಸಿಖ್ ಸಮುದಾಯದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜನೆವರಿ 16 ಕೊನೆಯ ದಿನವಾಗಿರುತ್ತದೆ.ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಬಾರ್ ಕೌನ್ಸಿಲ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿರಬೇಕು ಮತ್ತು ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 30 ವರ್ಷ ವಯೋಮಿತಿ ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ಸರಕಾರಿ ವಕೀಲರು ಅಥವಾ ಕನಿಷ್ಠ 20 ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ಯಾವುದೇ ಹಿರಿಯ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು.
ಆಸಕ್ತ ಕಾನೂನು ಪದವೀಧರರು ನಿಗಧಿತ ಅರ್ಜಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿ,ಅಲ್ಪಸಂಖ್ಯಾತರ ಮೌಲಾನಾ ಆಜಾದ ಭವನ ಡಿ.ಸಿ.ಕಛೇರಿ ಆವರಣ ಬಾಗಲಕೋಟೆ ಇವರಿಂದ ಪಡೆದು ನಿಗದಿಪಡಿಸಿದ ದಿನಾಂಕದೊಳಗೆ ಸಲ್ಲಿಸುವುದು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೂರವಾಣಿ ಸಂಖ್ಯೆ: 08354-200044 ಯನ್ನು ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಆನಂದ ಮ.ಹೂಗಾರ.ರಬಕವಿ ಬನಹಟ್ಟಿ