“ಸತ್ಯ ಹೇಳಲು ಬಹಳ ಧೈರ್ಯ ಬೇಕು ಎನ್ನುವ ಸ್ಥಿತಿಯಲ್ಲಿ ಸಮಾಜ ಇರಬಾರದು”
—ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ
“ಸತ್ಯ ಹೇಳಲು ಧೈರ್ಯ ಬೇಕಾಗಿಲ್ಲ,ಕೇವಲ ಸತ್ಯವನ್ನು ಹೇಳಿದರೆ ಸಾಕು,ಆದರೆ ಪರಿಸ್ಥಿತಿ ಹೇಗಿದೆ ಎಂದರೆ ಸತ್ಯ ಹೇಳಲು ಬಹಳ ಧೈರ್ಯ ಬೇಕು ಎನ್ನುವ ಸ್ಥಿತಿಯಲ್ಲಿ ಸಮಾಜವಿದೆ ಆದರೆ ಹಾಗಿರಬಾರದು ಹಾಗಿದ್ದಾಗ ಅದು ಸತ್ಯಕ್ಕೆ ಮಾಡುವ ಅಪಚಾರ ಸತ್ಯವನ್ನು ಅತ್ಯಂತ ಸರಳವಾಗಿ,ಸ್ಪಷ್ಟವಾಗಿ ಯಾವುದೇ ಸಂಕೋಲೆ ಇಲ್ಲದೆ ಹೇಳಿಬಿಡಬೇಕು.ಆಗ ಮಾತ್ರ ಸಮಾಜ ಆರೋಗ್ಯಕರ ಸ್ಥಿತಿಯಲ್ಲಿ ಇದೆ ಎಂದರ್ಥ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ,ಚಿಂತಕ,ವಾಗ್ಮಿ ಲಕ್ಷ್ಮೀಶ ತೋಳ್ಪಾಡಿಯವರು ತಿಳಿಸಿದರು.ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ,ಚಾಮರಾಜಪೇಟೆ:ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಆಯೋಜಿಸಲಾಗಿದ್ದ ‘ಪ್ರೆಸ್ ಕ್ಲಬ್ ಕೌನ್ಸಿಲ್ ಅವಾರ್ಡ್’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ,ಮಣ್ಣೆ ಮೋಹನ್ ವಿರಚಿತ ಕ್ಷೇತ್ರ ಕಥನಗಳು-2 ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು “2024ರ ಹೊಸ್ತಿಲಲ್ಲಿ ನಿಂತಿದ್ದೇವೆ.ಕಾಲಪುರುಷ ನಮ್ಮನ್ನು ಒಂದು ವರ್ಷವಾಯಿತು ಏನು ಮಾಡಿದೆ ಎಂದು ಕೇಳಿದರೆ ನಾವು ಏನು ಹೇಳಬೇಕು?ಈ ವರ್ಷ ನಾನು ಒಂದು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಏನಾದರೂ ಸಾಕ್ಷಿ ಬೇಕಲ್ಲವೇ?ಕನಿಷ್ಠ ಕೆಟ್ಟ ಕೆಲಸ ಮಾಡಿಲ್ಲ ಎಂಬ ಆತ್ಮತೃಪ್ತಿಯಾದರೂ ಇರಬೇಕಲ್ಲವೇ?ಇಷ್ಟನ್ನು ಹೇಳಿಕೊಳ್ಳುವ ಯೋಗ್ಯತೆ ನಮ್ಮಲ್ಲಿದ್ದರೆ ಹೊಸ ವರ್ಷವನ್ನು ಸ್ವಾಗತಿಸುವ ಯೋಗ್ಯತೆ ನಮಗೆ ಬರುತ್ತದೆ.ಇಲ್ಲದಿದ್ದರೆ ಹೊಸ ವರ್ಷವೂ ನಮಗೆ ಮಾಮೂಲಿ ಇನ್ನೊಂದು ದಿನವಾಗುತ್ತದೆ ಅಷ್ಟೇ ನಾವುಗಳು ಪ್ರಜಾಪ್ರಭುತ್ವದಲ್ಲಿದ್ದೇವೆ.ಪ್ರಜಾಪ್ರಭುತ್ವದ ಮೊದಲ ಲಕ್ಷಣ ಏನೆಂದರೆ ಪಾರದರ್ಶಕತೆ ನಮಗೆ ವಾಕ್ ಸ್ವಾತಂತ್ರ್ಯವಿದೆ ಸತ್ಯ ಹೇಳುವ ಗುಣ ನಮ್ಮಲ್ಲಿರಬೇಕು ಎಷ್ಟು ಸಮಯ ಬದುಕುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ..?ಇಂಥ ಕ್ಷಣಿಕವಾದ ಜೀವನದಲ್ಲಿ ಸತ್ಯಕ್ಕೆ ಮಹತ್ವ ಕೊಡಲು ನಮ್ಮಿಂದ ಸಾಧ್ಯವಾಗದಿದ್ದರೆ ಈ ದೇಶದಲ್ಲಿ ನಾವು ಹುಟ್ಟಿದ್ದಾದರೂ ಏಕೆ?ನನಗೆ ಸನ್ಮಾನ ಮಾಡುವ ಅವಶ್ಯಕತೆಯೇ ಇಲ್ಲ.ಯಾರು ಸತ್ಯವನ್ನು ಹೇಳುವ ಧೈರ್ಯ ತೋರುತ್ತಾರೆಯೋ ಅಂಥವರಿಗೆ ಸನ್ಮಾನ ಮಾಡಿ”ಎಂದು ಸತ್ಯದ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ನಗೆ ಬರಹಗಾರ ಮತ್ತು ಭಾಷಣಕಾರ ಎಂ.ಎಸ್. ನರಸಿಂಹಮೂರ್ತಿಯವರು ಮಾತನಾಡಿ “ಹೊಸ ವರ್ಷಕ್ಕೆ ನಾಂದಿಯಂತೆ ನಮ್ಮ ಪ್ರೆಸ್ ಕ್ಲಬ್ ಕೌನ್ಸಿಲ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಕೊರೋನಾ ಸಂದರ್ಭದ ಅತ್ಯಂತ ಕ್ಲಿಷ್ಟಕರವಾದ ಸಮಯದಲ್ಲಿ ಹುಟ್ಟಿಕೊಂಡ “ಪ್ರೆಸ್ ಕ್ಲಬ್ ಕೌನ್ಸಿಲ್” ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಿದೆ.ಕೊರೋನಾದಲ್ಲಿ ಎಲ್ಲವೂ ಲಾಕ್ ಡೌನ್ ಆಗಿತ್ತು ಯಾವುದೇ ವಾಹನಗಳು ಓಡಾಡುವಂತಿರಲಿಲ್ಲ. ಅಂತಹ ಸಂದರ್ಭದಲ್ಲಿ ಗೀತಾ ಸುರತ್ಕಲ್ ಎನ್ನುವ ಒಬ್ಬ ಹೆಣ್ಣು ಮಗಳನ್ನು ಸುರತ್ಕಲ್ಲಿಗೆ ತಲುಪಿಸಬೇಕಿತ್ತು ಆದರೆ ಅವರಿಗೆ ಯಾವುದೇ ವಾಹನ ಬುಕ್ ಮಾಡಲು ಆಗಲಿಲ್ಲ ಅಂತಹ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ನ ರಾಘವೇಂದ್ರಚಾರ್ ಮತ್ತು ಅವರ ತಂಡ ಕೇವಲ ಆರು ಗಂಟೆಯಲ್ಲಿ ಸುರಕ್ಷಿತವಾಗಿ ಅವರದೇ ವಾಹನದಲ್ಲಿ ಸೂರತ್ಕಲ್ಲಿಗೆ ತಲುಪಿಸಿತು ಇದು ಪ್ರೆಸ್ ಕ್ಲಬ್ ಕೌನ್ಸಿಲ್ ಕಾರ್ಯವೈಖರಿಗೆ ಒಂದು ಉದಾಹರಣೆ ಅಷ್ಟೇ” ಎಂದರು ಮುಂದುವರೆದು ಮಾತನಾಡಿ “ಕೊರೋನಾ ಲಾಕ್ ಡೌನ್ ಕಾರಣ ಲಂಡನ್ ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭಕ್ಕೆ ನನಗೆ ಹೋಗಲು ಸಾಧ್ಯವಾಗಲಿಲ್ಲ ಅಲ್ಲಿನವರು ನೀವು ಯೋಚನೆ ಮಾಡಬೇಡಿ ಸರ್,ನಾವು ಆನ್ ಲೈನ್ ನಲ್ಲಿಯೇ ನಿಮಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿ,ಅಲ್ಲಿಯೇ ನನ್ನ ಫೋಟೋ ಇಟ್ಟು,ಅದಕ್ಕೆ ಶಾಲು ಹೊದಿಸಿ,ಪೇಟಾ ತೊಡಿಸಿ,ಹಾರ ಹಾಕಿ ಸನ್ಮಾನ ಮಾಡಿಯೇ ಬಿಟ್ಟರು.ಫೋನ್ ಮಾಡಿ ಅಭಿನಂದನೆಯನ್ನು ತಿಳಿಸಿದರು ಆಗ ನಾನು ಎಲ್ಲವನ್ನೂ ಸೊಗಸಾಗಿ ಮಾಡಿದ್ದೀರಾ,ಹಾಗೆಯೇ ನನ್ನ ಫೋಟೋಗೆ ಎರಡು ಊದುಕಡ್ಡಿ ಹಚ್ಚಿಬಿಡಿ ತುಂಬಾ ಚೆನ್ನಾಗಿರುತ್ತೆ ಎಂದೆ ಎಲ್ಲರೂ ಗೊಳ್ಳೆಂದು ನಕ್ಕರು. ಇಂತಹ ಅನೇಕ ಹಾಸ್ಯ ಪ್ರಸಂಗಗಳು ನಮ್ಮ ಜೀವನದಲ್ಲಿ ನಡೆಯುತ್ತಿರುತ್ತವೆ”ಎಂದು ತಿಳಿಸಿ, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಭದ್ರತಾ ವಿಭಾಗದ ಎಸ್ಪಿ ಹರಿರಾಮ್ ಶಂಕರ್ ಐಪಿಎಸ್,ಅವರು ಮಾತನಾಡಿ “ಚುನಾವಣಾ ಸಂದರ್ಭದಲ್ಲಿ ಕರ್ನಾಟಕದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಬಾರದೆ ಇರಲು ಮಾಧ್ಯಮ ಮಿತ್ರರ ಪಾತ್ರ ಬಹಳ ದೊಡ್ಡದು ಹಾಗೆಯೇ ಕರೋನಾ ಎಂಬ ಹೆಮ್ಮಾರಿ ಮತ್ತೆ ಬರುತ್ತಿದೆ ಇದನ್ನು ಸಮರ್ಥವಾಗಿ ಎದುರಿಸಲು ಮಾಧ್ಯಮ ಮಿತ್ರರ ಸಹಕಾರ ತುಂಬಾ ಮುಖ್ಯ. ಒಬ್ಬ ಪೊಲೀಸ್ ಅಧಿಕಾರಿಯಾಗಿ,ಎಸ್‌ಪಿಯಾಗಿ ನಾನು ಮಾಡುವ ಕೆಲಸ ಸಮಾಜಕ್ಕೆ ತಲುಪಬೇಕಾದರೆ ಅದಕ್ಕೆ ಮಾಧ್ಯಮ ಬಹಳ ಮುಖ್ಯವಾದದ್ದು.ಹಾಗೆಯೇ ಕಾರ್ಯಾಂಗ ಮತ್ತು ಶಾಸಕಾಂಗ ಸರಿಯಾಗಿ ಕೆಲಸ ಮಾಡದೆ ಇದ್ದಾಗ ಅದನ್ನು ಸಾರ್ವಜನಿಕರ ಗಮನಕ್ಕೆ ತರದೆ ಇದ್ದರೆ ಅದು ಮಾಧ್ಯಮದ ಲೋಪವಾಗುತ್ತದೆ ಮಾಧ್ಯಮದವರು ತಮ್ಮ ಜವಾಬ್ದಾರಿಯನ್ನು ಅರಿತು, ಸಾರ್ವಜನಿಕ ಬದ್ಧತೆಯನ್ನು ಅರಿತು ಯಾವುದೇ ಅಪವಾದಕ್ಕೆ ಒಳಗಾಗದೆ ತಮ್ಮ ಕೆಲಸವನ್ನು ನಿರ್ವಹಿಸಬೇಕು ಒಳ್ಳೆಯ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮದವರ ಕಾರ್ಯ ಅತ್ಯಂತ ಶ್ಯಾಘನೀಯ ಪ್ರೆಸ್ ಕ್ಲಬ್ ಕೌನ್ಸಿಲ್ ಸಹ ಅತ್ಯಂತ ಒಳ್ಳೆಯ ಕೆಲಸದಲ್ಲಿ ತೊಡಗಿದೆ ಸಮಾಜದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಪ್ರಶಸ್ತಿ ಕೊಡುವುದರ ಮೂಲಕ ಪ್ರೋತ್ಸಾಹಿಸುತ್ತಿರುವುದು ಪ್ರೆಸ್ ಕ್ಲಬ್ ಕೌನ್ಸಿಲ್ ವಿಶೇಷವಾಗಿದೆ ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಲೇಖಕ ಚಿಂತಕ ಮಣ್ಣೆ ಮೋಹನ್ ರವರು ಎಲ್ಲರಿಗೂ ಸ್ವಾಗತ ಕೋರಿ,ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ “ಕೊರೋನಾ ಕಾಲಘಟ್ಟದಲ್ಲಿ ಸಂತ್ರಸ್ತರಾದ ಜನರಿಗೆ ಒಂದಷ್ಟು ಸಾಂತ್ವನ ಹೇಳಬೇಕೆಂಬ ಉದ್ದೇಶದಿಂದ ಆರಂಭಗೊಂಡ “ಪ್ರೆಸ್ ಕ್ಲಬ್ ಕೌನ್ಸಿಲ್” ಅನೇಕ ಜನಪರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಹಾಗೆಯೇ ಸಮಾಜ ಸೇವೆಯಲ್ಲಿ ನಿರತನಾದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಪಾಲಿಸಿಕೊಂಡು ಬರುತ್ತಿದೆ.ಕಳೆದ ಬಾರಿ ವಿಶ್ವೇಶ್ವರ ಭಟ್,ಚನ್ನೆಗೌಡ, ಪದ್ಮ ನಾಗರಾಜ್,ಮಣ್ಣೆ ಮೋಹನ್,ಡಾ.ರಾಮಚಂದ್ರ,ಡಾ.ಸತೀಶ್ ಕುಮಾರ್ ಹೊಸಮನಿ,ಅನುಚೇತ್,ಪ್ರಕಾಶ್ ಗೌಡ್ರು, ಊಡೆ.ಪಿ.ಕೃಷ್ಣ ಮುಂತಾದ 15 ಗಣ್ಯರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿಯೂ 12 ಜನರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ” ಎಂದರು.
ಇದೇ ಸಂದರ್ಭದಲ್ಲಿ ಮಣ್ಣೆ ಮೋಹನ್ ವಿರಚಿತ 26ನೇ ಕೃತಿ “ಕ್ಷೇತ್ರ ಕಥನಗಳು-2 ” ಲೋಕಾರ್ಪಣೆಗೊಳಿಸಲಾಯಿತು.ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಹೊರತಂದಿರುವ 2024 ರ ಕ್ಯಾಲೆಂಡರ್ ಅನ್ನು ಕೂಡಾ ಎಲ್ಲಾ ಅತಿಥಿಗಳು ಬಿಡುಗಡೆ ಮಾಡಿದರು.
2023 -24ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀಶ ತೋಳ್ಪಾಡಿ ಸಾಹಿತಿ,ಚಿಂತಕ,ವಾಗ್ಮಿ;ಎಂ ಎಸ್ ನರಸಿಂಹಮೂರ್ತಿ,ನಗೆ ಭಾಷಣಗಾರ ಹಾಗೂ ಬರಹಗಾರ;ಡಾ. ಶಂಕರ್,ಹಿರಿಯ ವೈದ್ಯಾಧಿಕಾರಿ ವಿಕ್ಟೋರಿಯಾ ಮತ್ತು ಬೋರಿಂಗ್ ಆಸ್ಪತ್ರೆ; ಲಕ್ಷ್ಮೀನಾರಾಯಣ,ಸಮಾಜ ಸೇವಕರು ಹಾಗೂ ಉದ್ಯಮಿ;ರಾಮಾಚಾರ್,ಹಿರಿಯ ಪತ್ರಕರ್ತ,ಸಂಪಾದಕ ಹಂಸಲೇಖ ಪತ್ರಿಕೆ; ವೆಂಕಟೇಶ್,ಪೊಲೀಸ್ ಇನ್ಸ್ಪೆಕ್ಟರ್,ಲೋಕಾಯುಕ್ತ ಬೆಂಗಳೂರು;ವೆಟರ್ನರಿ ಹಾಗೂ ರೇಡಿಯಾಲಜಿ ಪ್ರೊಫೆಸರ್ ಶ್ರೀನಿವಾಸ್ ಮೂರ್ತಿ;ವಿಜಯ ಕರ್ನಾಟಕ ಹಿರಿಯ ಛಾಯಾಗ್ರಹಕ ಗಣೇಶ್ ಮತ್ತು ಇನ್ನು ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಹುಲ್ ಕುಮಾರ್ ಶಾಹಾಪುರ್ ವಾಡ್ ಐಪಿಎಸ್, ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ;ಹರಿರಾಮ್ ಶಂಕರ್ ಐಪಿಎಸ್,ಭದ್ರತಾ ವಿಭಾಗ ಎಸ್ಪಿ ಬೆಂಗಳೂರು;ಶ್ರೀಕಾಂತ್ ಎಂ ಕಾಂಗ್ರೆಸ್ ಮುಖಂಡರು ಶಿವಮೊಗ್ಗ; ರಾಘವೇಂದ್ರ ಆಚಾರ್.ಆರ್.ಪತ್ರಕರ್ತ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು,ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು;ಶ್ರೀಮತಿ ಆಶಾ ಸೀನಪ್ಪ, ಪ್ರಧಾನ ಕಾರ್ಯದರ್ಶಿ,ಪ್ರೆಸ್ ಕ್ಲಬ್ ಕೌನ್ಸಿಲ್; ಸೋಮನಾಥ ನಾಯಕ್,ಸತ್ಯಮೇವ ಜಯತೆ ಸಂಘಟನೆಗಳ ಒಕ್ಕೂಟ ಮತ್ತು ನಾಗರಿಕ ಸೇವಾ ಟ್ರಸ್ಟ್,ಬೆಳ್ತಂಗಡಿ;ಮಣ್ಣೆ ಮೋಹನ್,ಲೇಖಕ,ಚಿಂತಕ ಮತ್ತು ಅಂಕಣಕಾರರು;ಲಿಂಗರಾಜ್ ಗೌಡ ನಿರ್ದೇಶಕರು;ಕೊಟ್ರೇಶ್,ಕಾರ್ಯದರ್ಶಿ;ನಾಗೇಶ್, ನಿರ್ದೇಶಕರು ಮತ್ತು ಖಜಾಂಚಿ ಎಂ ಡಿ ರಂಗನಾಥ್ ಗೌಡ, ಗಂಗಾಧರ್ ಮತ್ತು ಪ್ರೆಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಇನ್ನೂ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.ವಿಜಯ್ ಹೊಸಪಾಳ್ಯ ಕಾರ್ಯಕ್ರಮ ನಿರೂಪಿಸಿದರು.