ಬುದ್ದಿಮಾಂದ್ಯ ಮಕ್ಕಳಿಗೆ ಸಹಾಯ ಹಸ್ತ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು:ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ.
ಸೊರಬ:ಬುದ್ದಿಮಾಂದ್ಯತೆ ಕಾಯಿಲೆಯಲ್ಲ,ಮಕ್ಕಳು ಅವರ ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ ಹಾಗೆ ವರ್ತಿಸುತ್ತಾರೆ.ಅವರಿಗೆ ಸೂಕ್ತ ಶಿಕ್ಷಣ,ಆರೈಕೆ ಮಾಡಿದರೆ ಅವರೂ ಸಹ ಸಮಾಜದಲ್ಲಿ ಎಲ್ಲರಂತೆ ಬದುಕಬಲ್ಲರು ಎಂದು ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ದಿಮಾಂದ್ಯ ಮಕ್ಕಳ ಶಾಲೆ ವಿದ್ಯಾರ್ಥಿಗಳಿಗೆ ವಕೀಲ ಮಿತ್ರರ ವತಿಯಿಂದ ಉಚಿತ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದ ಅವರು
ಬುದ್ದಿಮಾಂದ್ಯ ಮಕ್ಕಳ ಜೀವನ,ಹಾದಿ ಸವಾಲಿನಿಂದ ಕೂಡಿದೆ.ಇವರ ಬಗ್ಗೆ ಕರುಣೆ ತೋರಿದರೆ ಸಾಲದು, ಸಮಾಜದಲ್ಲಿ ಅವರಿಗೂ ಎಲ್ಲರಂತೆ ಬದುಕುವ ಹಕ್ಕು, ಅವಕಾಶಗಳಿವೆ.ಇಂತಹವರ ಬಾಳು ಹಸನುಗೊಳಿಸಿ, ಬೆಳಕು ಚೆಲ್ಲುವಲ್ಲಿ ಅನಾವಶ್ಯಕ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಇಂತಹ ಮಕ್ಕಳಿಗೆ ಸಹಾಯ ಹಸ್ತ ನೀಡಲು ಪ್ರತಿಯೊಬ್ಬರೂ ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಮಕ್ಕಳಲ್ಲಿ ಒಂದು ಮಗುವನ್ನು ನಿಭಾಯಿಸಲು ಕಷ್ಟಪಡುವ ನಾವು ಇಂತಹ 50 ಕ್ಕೂ ಹೆಚ್ಚು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಈ ಶಾಲೆಯ ಶಿಕ್ಷಕರ ಸೇವೆ ಅಭಿನಂದನಾರ್ಹ.ಈ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂದು ವಕೀಲ ಮಿತ್ರರಾದ ನಾಗರಾಜ.ಎಂ.ವಿನಯ ಪಾಟೀಲ್,ರಂಗನಾಥ ಚಕ್ರಪಾಣಿ,ಡಾಕಪ್ಪ,ಲಕ್ಷ್ಮಣ ಕೆ.ಪಿ,ಸಂದೀಪ್ ಹಾಗೂ ಇಲ್ಲಿರುವ ವಕೀಲ ಸ್ನೇಹಿತರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಎಲ್ಲರೂ ಬಟ್ಟೆಗಳನ್ನು ವಿತರಿಸಿ ಆ ಮಕ್ಕಳನ್ನು ಸಂತಸ ಪಡಿಸೋಣ ಎಂದು ಹೇಳಿದ್ದರಿಂದ ಇಂದು ಮಕ್ಕಳಿಗೆ ಬಟ್ಟೆಗಳನ್ನು ವಿತರಿಸುತ್ತಿರುವುದು ಸಂತಸವಾಗುತ್ತಿದೆ ಎಂದರು.
ನ್ಯಾಯವಾದಿ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ ಬುದ್ದಿಮಾಂದ್ಯರ ಬಗ್ಗೆ ಕರುಣೆ,ಅನುಕಂಪ ತೋರುವುದು ಬೇಡ, ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಮುಂಚೂಣಿಗೆ ತರುವ ಮೂಲಕ ಸಹಾಯಹಸ್ತ ಚಾಚಬೇಕು.ಯಾವುದೋ ಒಂದು ಕಾರಣದಿಂದ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಇಂತಹ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ಕಾಣದೆ ಅವರನ್ನು ಸಮಾಜ ಒಳ್ಳೆಯ ದೃಷ್ಠಿಯಿಂದ ಕಂಡು ಅವರಿಗೂ ಸಹ ನಮ್ಮಂತೆ ಬದುಕುವ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ದಿನಕರಭಟ್ ಭಾವೆ, ಭೀಮಪ್ಪ ಹೆಚ್.ಬಿ,ಸುರೇಶ್ ಕಲ್ಲಂಬಿ,ಗಂಗಾಧರ.ಟಿ, ಪೂರ್ಣಿಮಾ ಭಾವೆ,ಶಾಲಾ ಶಿಕ್ಷಕರಾದ ಪುಟ್ಟರಾಜು, ರವೀಂದ್ರ,ಪ್ರಶಾಂತ್,ಪಲ್ಲವಿ,ಗಾಯತ್ರಿ,ಮಂಗಳ ಮತ್ತಿತರರಿದ್ದರು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್, ಸೊರಬ