ಕಲಬುರಗಿ:ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿಯ ಸಿಟಿ ಬಸ್ ನಿಲ್ದಾಣವು ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲು ಸಜ್ಜಾಗಿ ನಿಂತಿದ್ದು ಕಲಬುರಗಿ ಜನತೆಯ ಮನಸ್ಸಿಗೆ ಸಂತಸ ತಂದಿದೆ.
ತಡವಾದರೂ ಪರವಾಗಿಲ್ಲ.ಒಂದು ಸುಂದರ, ಮನಮೋಹಕ ಕಟ್ಟಡ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದಗೊಳ್ಳುತ್ತಿದ್ದು. ಹಲವಾರು ವರ್ಷಗಳ ಕಾಲ ಹಳೇ ನಿಲ್ದಾಣವಿತ್ತು, ಜಾಗ ಬಹಳ ಇದ್ದರೂ ಸಹ ರಸ್ತೆ ಮೇಲೆಯೇ ನಿಲ್ದಾಣವಿದೆ ಎಂದು ಭಾಸವಾಗುತ್ತಿತ್ತು,ಆದರೆ ಇದೀಗ ಅದೆಲ್ಲದಕ್ಕೂ ತೆರೆ ಬಿದ್ದಂತಾಗಿದೆ ಕೊನೆಗೂ ಇದಕ್ಕೊಂದು ಸುಂದರವಾದ ಕಟ್ಟಡ ಕಟ್ಟುವ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಹುದಿನಗಳ ಬೇಡಿಕೆ ಈಡೇರಿಸಿದೆ.ಈ ನೂತನ ಬಸ್ ನಿಲ್ದಾಣದ ಕಟ್ಟಡವು ಕಲಬುರಗಿ ನಗರದ ಸೂಪರ್ ಮಾರ್ಕೆಟ್’ನಲ್ಲಿರುವ 1.36 ಎಕರೆ ಪ್ರದೇಶದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಪ್ರಯಾಣಿಕರ ಸೌಲಭ್ಯ ಸಂಕೀರ್ಣದೊಂದಿಗೆ ನಿರ್ಮಾಣಗೊಳ್ಳುತ್ತಿದ್ದೂ ಇದೇ ಜನವರಿ ಅಂತ್ಯಕ್ಕೆ ಉದ್ಘಾಟಿಸಲು ಸಿದ್ಧತೆ ನಡೆದಿದೆ. 2019 ರ ಆಗಸ್ಟ್ 1 ರಂದು ಆರಂಭವಾದ ಈ ಕಾಮಗಾರಿಯನ್ನು ಮೈಸೂರು ಕನ್ಟ್ರಕ್ಷನ್’ನ ಅನೀಲ್’ಕುಮಾರ್ ಮಾಲಪಾನಿಯವರಿಗೆ ಗುತ್ತಿಗೆ ನಿಡಲಾಗಿತ್ತು.ಒಟ್ಟು ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಕೆಕೆಆರ್’ಡಿಬಿ, ಬಂಡವಾಳ ವೆಚ್ಚ,ವಿಶೇಷ ಅಭಿವೃಧ್ಧಿ ಯೋಜನೆ ಅನುದಾನ ಸೇರಿ ಈಗಾಗಲೇ ₹18.80 ಕೋಟಿ ಬಿಡುಗಡೆಯಾಗಿದೆ.ಈ ನೂತನ ಬಸ್ ನಿಲ್ದಾಣದಲ್ಲಿ ನೆಲ ಅಂತಸ್ತಿನಲ್ಲಿ ಬಸ್’ಗಳ ನಿಲುಡೆಗೆ ಮೂರು ಅಂಕಣ ನಿರ್ಮಿಸಲಾಗಿದ್ದು,ತಲಾ 4ರಂತೆ ಏಕ ಕಾಲದಲ್ಲಿ 12ಬಸ್’ಗಳನ್ನು ನಿಲ್ಲಿಸಬಹುದಾಗಿದೆ.ಬಾಕಿ ₹1.20 ಕೋಟಿ ಅನುದಾನ ಬಂದ ನಂತರ ಮೇಲಂತಸ್ತಿನಲ್ಲಿ ಬಸ್’ಗಳ ನಿಲುಗಡೆಗೆ ವ್ಯವಸ್ಥೆ ಮತ್ತು ಇತರೆ ಕಾಮಗಾರಿ ಕೈಗೊಳ್ಳುವುದಾಗಿ ಕೆಕೆಆರ್’ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಚಾರ ನಿಯಂತ್ರಕರ ಕೊಠಡಿ,ಮುಂಗಡ ಟಿಕೆಟ್ ಕಾಯ್ದಿರಿಸುವ ಕೊಠಡಿ,ಮಹಿಳಾ ನಿರೀಕ್ಷಣಾಲಯ, ಪ್ರಯಾಣಿಕರ ರ್‍ಯಾಂಪ್,ಶುದ್ಧ ನೀರಿನ ಘಟಕ, ಪ್ರಯಾಣಿಕರ ಪ್ರಾಂಗಣ,ಉಪಾಹಾರ ಗೃಹ,ಪಾಸ್ ವಿತರಿಸುವ ಕೊಠಡಿ,ಪುರುಷರ ಮತ್ತು ಮಹಿಳೆಯರ 3 ಶೌಚಾಲಯಗಳು,ಉದ್ಯಾನ,ವಿಶೇಷ ಬೆಳಕಿನ ವ್ಯವಸ್ಥೆಯಂತಹ ಸೌಕರ್ಯಗಳನ್ನು ಬಸ್‌ನಿಲ್ದಾಣ ಒಳಗೊಂಡಿದ್ದು.ನಿಲ್ದಾಣದ ಒಳಗಡೆ 6 ವಾಣಿಜ್ಯ ಮಳಿಗೆಗಳಿದ್ದರೆ,ಪಕ್ಕದ ಪ್ರಯಾಣಿಕರ ಸೌಕರ್ಯ ಕೇಂದ್ರ ಸಂಕೀರ್ಣದಲ್ಲಿ 75 ಮಳಿಗೆಗಳನ್ನು ನಿರ್ಮಿಸಲಾಗಿದೆ.ಪ್ರಸ್ತುತ ನಗರ ಸಾರಿಗೆಯ 46 ಬಸ್ 227 ಟ್ರಿಪ್ ಮತ್ತು ಉಪ ನಗರ ಸಾರಿಗೆಯ 36 ಬಸ್‌ಗಳು 189 ಟ್ರಿಪ್ ಕಾರ್ಯಾಚರಣೆ ನಡೆಸುತ್ತಿವೆ. ಜೇವರ್ಗಿ ಮಾರ್ಗದ 14 ಗ್ರಾಮ,ಅಫಜಲಪುರ ಮಾರ್ಗದ 10 ಗ್ರಾಮ,ಕಾಳಗಿ ಮಾರ್ಗದ 5 ಗ್ರಾಮ, ಆಳಂದ ಮಾರ್ಗದ 10 ಗ್ರಾಮ, ಶಹಾಬಾದ್ ಮಾರ್ಗದ 5 ಗ್ರಾಮ ಸೇರಿದಂತೆ ಸೇಡಂ ಮಾರ್ಗದ 13 ಗ್ರಾಮ ಮತ್ತು ನಗರಗಳಿಗೆ ಈ ಬಸ್‌ಗಳು ಸಂಚರಿಸುತ್ತಿವೆ.‘ಕೇಂದ್ರ ಬಸ್ ನಿಲ್ದಾಣದಿಂದ ಮಾರ್ಕೆಟ್ ಮೂಲಕ ಹುಮನಾಬಾದ್ ರಿಂಗ್ ರೋಡ್ ಮಾರ್ಗವಾಗಿ ನೇರವಾಗಿ ತೆರಳುವ ಬಸ್‌ಗಳು ನಗರ ಬಸ್ ನಿಲ್ದಾಣ ಉದ್ಘಾಟನೆ ನಂತರ ಇಲ್ಲಿಗೆ ಬರಲಿದ್ದು. ವೃದ್ಧರು,ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಲಿದೆ.
ವರದಿ:ಅಪ್ಪಾರಾಯ ಬಡಿಗೇರ