ಚಾಮರಾಜನಗರ:ಸಂವಿಧಾನ ಜಾಗೃತಿ ಸ್ತಬ್ದ ಚಿತ್ರವು ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಮಾರ್ಗದಲ್ಲಿ ಸಂಚಾರ ನಡೆಸಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಜಾಥಾವನ್ನು ಮಲೆ ಮಹದೇಶ್ವರ ಬೆಟ್ಟದ ಆನೆತಲೆದಿಂಬದಿಂದ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು ಮತ್ತು ಮಲೆ ಮಹದೇಶ್ವರ ಬೆಟ್ಟದ ಗ್ರಾಮದಲ್ಲಿ ಬೈಕ್ ರ್ಯಾಲಿಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಶಾಲಾ ವಿದ್ಯಾರ್ಥಿನಿಯರ ಕೋಲಾಟ,ಸಾಮೂಹಿಕ ನೃತ್ಯ,ಡೊಳ್ಳುಕುಣಿತ,ತಮಟೆ ವಾದ್ಯ ವಿಶೇಷವಾಗಿದ್ದವು.
ಮಲೆ ಮಹದೇಶ್ವರ ಬೆಟ್ಟದ ಕಾರ್ಯದರ್ಶಿ ರಘು ಅವರು ಮಾತನಾಡಿ,ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ.ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ ದೊಡ್ಡ ಲಿಖಿತ ಸಂವಿಧಾನವಾಗಿದ್ದು,ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯಲು ಕಾರಣವಾಗಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಪ್ರಭುಸ್ವಾಮಿ ಅವರು ಮಾತನಾಡಿ ನಮ್ಮ ದೇಶವು ಹಲವಾರು,ಧರ್ಮಗಳು, ಆಚರಣೆಗಳು,ವಿಚಾರಗಳು,ಸಾವಿರಾರು ರೂಢಿಗಳು, ಸಂಪ್ರದಾಯಗಳು ಇದ್ದರೂ,ವೈವಿದ್ಯತೆಯಲ್ಲಿ ಏಕತೆಯಿಂದ ಕೂಡಿದೆ.ಎಲ್ಲವೂ ಭಾರತದ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದರು.
ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರ್ಚನಾ,ಉಪಾಧ್ಯಕ್ಷರಾದ ಕೆಂಪಾರೆ,ಅಭಿವೃದ್ಧಿ ಅಧಿಕಾರಿ ಕಿರಣ್,ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು,ಜನಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ:ಉಸ್ಮಾನ್ ಖಾನ್