ಸೊರಬ:ಬೆಲೆಯುಳ್ಳ ಬದುಕಿಗೆ ಸಂಸ್ಕಾರ ಮುಖ್ಯ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ಕರ್ತವ್ಯ,ಶಿಸ್ತು,ಶ್ರದ್ಧೆ,ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಭಾನುವಾರ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಧುನಿಕ ಕಾಲದಲ್ಲಿ ಮಾನವೀಯ ಸಂಬoಧಗಳು ಶಿಥಿಲಗೊಳ್ಳುತ್ತಿವೆ.ಮನುಷ್ಯನಿಗೆ ಮಾನಸಿಕ ಶಾಂತಿ ಸಂತೃಪ್ತಿ ಇಲ್ಲದಂತಾಗಿದೆ.ಭೌತಿಕ ಬದುಕು ಸಮೃದ್ಧಗೊಂಡoತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು.ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನದ ಅರಿವು ಮುಖ್ಯವೆಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ.ಅಂಗ ಅವಗುಣ ದೂರ ಮಾಡಿ ಲಿಂಗ ಗುಣ ಬೆಳೆಸಲು ವೀರಶೈವ ಧರ್ಮ ಸದಾ ಶ್ರಮಿಸಿದೆ.ಜ್ಞಾನ ಕ್ರಿಯಾತ್ಮಕವಾದ ಬದುಕಿನೊಂದಿಗೆ ಸಾಮಾಜಿಕ ಚಿಂತನೆಗೈದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಸ್ಕಾರ ಸಂಸ್ಕೃತಿ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ. ಅರಿವುಳ್ಳ ಜನ್ಮದಲ್ಲಿ ಬಂದು ಗುರು ಕಾರುಣ್ಯ ಪಡೆದು ಬಾಳಲು ಶ್ರಮಿಸಬೇಕು.ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತೋರುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬನ್ನಿಕೊಪ್ಪದ ಡಾ|| ಸುಜ್ಞಾನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವ ಜೀವನಕ್ಕೆ ಧರ್ಮ ದಿಕ್ಸೂಚಿ.ಜೀವನದಲ್ಲಿ ಗುರಿ ಮತ್ತು ಗುರು ಆಶ್ರಯಿಸಿ ಬದುಕಿನಲ್ಲಿ ಶ್ರೇಯಸ್ಸು ಕಾಣಬೇಕು ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಎಲ್ಲರ ಬಾಳಿನಲ್ಲಿ ಸ್ಫೂರ್ತಿ ತರುತ್ತವೆ ಎಂದರು.
ಜಿ.ಪಂ.ಮಾಜಿ ಸದಸ್ಯ ಗಿರೀಶ ಸಮಾರಂಭವನ್ನು ಉದ್ಘಾಟಿಸಿದರು.
ಮಠಾಧೀಶರಾದ ನಾಗಭೂಷಣ ಶ್ರೀ ಮಳಲಿ, ಡಾ.ಮಹಾಂತ ಶ್ರೀ ಜಡೆ,ಸಂಗೊಳ್ಳಿ ಗುರುಲಿಂಗಶ್ರೀ, ಕುರುವತ್ತಿ ನಂದೀಶ್ವರ ಶ್ರೀ,ಸ್ವಸ್ತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಲಕ್ಕವಳ್ಳಿ,ತಿರುಮಲಕೊಪ್ಪದ ದಾನ್ಯ ದೇವರು ನುಡಿ ನಮನ ಸಲ್ಲಿಸಿದರು.
ಪ್ರಾಂಶುಪಾಲ ಹೆಚ್.ಬಿ ಪಂಚಾಕ್ಷರಯ್ಯ ವೀರಶೈವ ಧರ್ಮದ ಹಿರಿಮೆ ಮತ್ತು ಗುರು ಮಹಿಮೆ ಕುರಿತು ಉಪನ್ಯಾಸ ನೀಡಿದರು.
ಸದಾನಂದಗೌಡ್ರು ಬಳಗಲಿ,ಜಡೆ ಕೆ.ಬಂಗಾರಪ್ಪಗೌಡ್ರು ಮತ್ತಿತರರು ಉಪಸ್ಥಿತರಿದ್ದರು.ಕಾಳಂಗಿ ಮತ್ತು ಅಗಸನಹಳ್ಳಿ ಭಜನಾ ಮಂಡಳಿಯಿoದ ಪ್ರಾರ್ಥನಾ ಗೀತೆ ಜರುಗಿತು.ಬಂಕವಳ್ಳಿ ಬಿ.ವೀರೇಂದ್ರಗೌಡ ನಿರೂಪಿಸಿದರು.ಕುಬಟೂರಿನ ಗಿರೀಶ ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.
ವರದಿ-ಸಂದೀಪ ಯು.ಎಲ್.,ಸೊರಬ