ಪುರಾಣ ಪ್ರಸಿದ್ದ ಮಂಚಿ ಹನುಮಂತ ದೇವರ ಜಾತ್ರೆ?
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ದ ಮಂಚಿ ಗ್ರಾಮದ ಹನುಮಂತ ದೇವರ ಜಾತ್ರೆ ವಿಶೇಷವಾಗಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಬುಡಸಹಿತ ಬಿಲ್ವಪತ್ರೆ ಮರಗಳನ್ನು ಕಿತ್ತು ತರುವ ಪವಾಡ ಸದೃಶ ಕಾರ್ಯ ಗುರುವಾರ ಸಹಸ್ರಾರು ಭಕ್ತರ ಶ್ರದ್ಧಾಭಕ್ತಿಯ ನಡುವೆ ನಡೆಯಿತು.
ಶ್ರೀರಾಮನ ಬ್ರಹ್ಮಹತ್ಯಾ ದೋಷ ನಿವಾರಣೆಗೆಂದು ಪೂಜೆ ಸಲ್ಲಿಸಲು ಬೇಕಿದ್ದ ಬಿಲ್ವಪತ್ರೆ ಮರಗಳನ್ನು 6 ವಾನರರು ಕಿತ್ತು ತಂದಿದ್ದರು ಎಂಬ ಪೌರಾಣಿಕ ಹಿನ್ನೆಲೆಯಲ್ಲಿ ಗ್ರಾಮದ ದಾಸ ಮನೆತನದ 6 ಜನ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಚರಣೆ ನಡೆದುಕೊಂಡು ಬಂದಿದೆ.
ಪ್ರತಿ ವರ್ಷದ ಪದ್ಧತಿಯಂತೆ ಗ್ರಾಮದ ದಾಸ ಮನೆತನದ ಆರು ಮಂದಿ ಹನುಮಂತ ದೇವರ ಭಕ್ತರು ಬೇರುಸಹಿತ ಮರವನ್ನು ಕಿತ್ತು ತರಲು ಬೆಳಿಗ್ಗೆ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಕೈಯಲ್ಲಿ ಕತ್ತಿ ಹಿಡಿದು 6 ಜನರು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ಗ್ರಾಮದಿಂದ ತೆರಳಿದರು.ಸಂಜೆಯ ವೇಳೆಗೆ ಬೇರು ಸಹಿತ ಬಿಲ್ವಪತ್ರೆ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನಲ್ಲಿ ಸಾಲಗಿ ಬರುತ್ತಾರೆ ಅವರು ಬರುವುದನ್ನು ನೋಡಲು ಗ್ರಾಮದ ಕೆರೆ ಅಂಗಳದಲ್ಲಿ ಸುತ್ತಮುತ್ತಲ ಗ್ರ‍್ರಾಮಗಳು,ವಿವಿಧ ಭಾಗಗಳ ಸಹಸ್ರಾರು ಜನರು ಜಮಾಯಿಸಿದ್ದರು.ಮರ ಹೊತ್ತು ತರುತ್ತಿದ್ದಂತೆ ಹರ್ಷೋದ್ಘಾರದಿಂದ ಸ್ವಾಗತಿಸಿ,ಭಕ್ತ ಸಮೂಹ ಮರಗಳಿಗೆ ನಮಸ್ಕರಿಸುತ್ತಾ ಅರಳಿಕಟ್ಟೆವರೆಗೆ ಸಾಗಿ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಬೇರು ಸಹಿತ ಮರ ಕಿತ್ತು ತರುವ ಪವಾಡ ಸದೃಶ್ಯ ದೃಶ್ಯ ನೋಡಿ ಮಳೆ ಬೆಳೆ ಬಗ್ಗೆ ವಿಶ್ಲೇಷಿಸುವುದು ಈ ಭಾಗದ ಜನರ ವಾಡಿಕೆಯಾಗಿದೆ.ಈ ಬಾರಿ ಬಂದ ಮರಗಳು ಹಸಿರಾಗಿದ್ದು,ಉತ್ತಮ ಮಳೆ-ಬೆಳೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್,ಸೊರಬ