ಬೀದರ:ಲೋಕಸಭಾ ಚುನಾವಣೆಯಲ್ಲಿ ನಾನು ಯಾರಿಗೂ ಜಗ್ಗುವುದಿಲ್ಲ,ಬಗ್ಗುವುದೂ ಇಲ್ಲ ಗೆದ್ದು ತೋರಿಸುವೆ ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸಲು ನಾನು ಎಂತಹ ಅವಮಾನಗಳನ್ನೂ ಮೆಟ್ಟಿ ನಿಲ್ಲಲು ಸಿದ್ಧನಾಗಿದ್ದೇನೆ.ನಿಮ್ಮೆಲ್ಲರ ಆಶಿರ್ವಾದ ನನಗೆ ಬೇಕು ಎಂದು ಬೀದರ ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಡಾ.ದಿನಕರರಾವ ಮೋರೆ ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಚಿಕ್ಕಪೇಟ್ ಸಮೀಪದ ಲಾವಣ್ಯ ಫಂಕ್ಷನ್ ಹಾಲ್‌ನಲ್ಲಿ ಬೀದರ ಸ್ವಾಭಿಮಾನಿ ಆಘಾಡಿ ವತಿಯಿಂದ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ನರೇಂದ್ರ ಮೋದಿಯವರ ಮುಖ ನೋಡಿಕೊಂಡು ಮರಾಠರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ತಿಳಿದುಕೊಂಡಿರುವುದು ಬಿಜೆಪಿ ಪಕ್ಷದ ತಪ್ಪು ತಿಳುವಳಿಕೆ.ವಿಧಾನಸಭೆ ಚುನಾವಣೆಯಲ್ಲಿ ಮರಾಠರಿಗೆ ಟಿಕೇಟ್ ನೀಡಲಿಲ್ಲ. ಲೋಕಸಭಾ ಚುನಾವಣೆಯಲ್ಲೂ ಸಮಾಜಕ್ಕೆ ಅನ್ಯಾಯವಾಗಿದೆ.ಮರಾಠರಿಗೆ ಟಿಕೇಟ್ ನೀಡಿದರೆ ಲಿಂಗಾಯತ ಮತಗಳು ಬರುವುದಿಲ್ಲ ಆದರೆ ಲಿಂಗಾಯತರಿಗೆ ನೀಡಿದರೆ ಮರಾಠರು ಕಣ್ಮುಚ್ಚಿ ಮತ ಹಾಕಬೇಕಾ?ಎಂದು ಪ್ರಶ್ನಿಸಿದರಲ್ಲದೆ,ಇಷ್ಟೆಲ್ಲಾ ಅವಮಾನ ರಾಷ್ಟ್ರೀಯ ಪಕ್ಷಗಳು ನಮಗೆ ಮಾಡುತ್ತಿವೆ.ಸುಳ್ಳು ಆಶ್ವಾಸನೆಗಳನ್ನು ನೀಡಿ ನಮಗೆ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಹೀಗಾಗಿ ನಾನು ಸ್ವಾಭಿಮಾನಿಯಾಗಿ ಈ ಬಾರಿ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.ನಾನು ಯಾರ ಹತ್ತಿರವೂ ಒಂದು ರೂಪಾಯಿ ಭಿಕ್ಷೆ ಬೇಡಿಲ್ಲ ನಾನು ಈಶ್ವರ ಖಂಡ್ರೆ ಹತ್ತಿರ ಹಣ ಪಡೆದಿದ್ದೇನೆ ಎಂದು ಹಲವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.ಇದು ಸತ್ಯಕ್ಕೆ ದೂರವಾದ ಮಾತು ನನ್ನ ಮೇಲೆ ವಿಶ್ವಾಸವಿಡಿ,ಸಂಸತ್‌ನಲ್ಲಿ ಮರಾಠ ಸಮಾಜದ ಬಗ್ಗೆ ಧ್ವನಿ ಎತ್ತಲು,ನಮ್ಮ ಸಮಾಜದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.ನನ್ನೊಂದಿಗೆ ಎಲ್ಲಾ ಸಮಾಜದ ಜನರಿದ್ದಾರೆ.ಮತ ನೀಡಿ ಆರಿಸಿ ತರುವಲ್ಲಿ ಸಹಕರಿಸಿ ಎಂದು ಮೋರೆ ಮನವಿ ಮಾಡಿಕೊಂಡರು.
ಬೀದರ ಸ್ವಾಭಿಮಾನಿ ಆಘಾಡಿಯ ಮುಖಂಡ ಪದ್ಮಾಕರ ಪಾಟೀಲ ಮಾತನಾಡಿ ಭಗವಂತ ಖೂಬಾ ಅವರಿಗೆ ಹತ್ತು ವರ್ಷಗಳ ಕಾಲ ಸಂಸದರಾಗಿ ಮಂತ್ರಿಯಾಗಿ ಮಾಡಿದರೂ ನಮ್ಮ ಮರಾಠಾ ಸಮಾಜದ ಸಮಸ್ಯೆಗಳ ಬಗ್ಗೆ,ಮೀಸಲಾತಿ ಬಗ್ಗೆ ಲೋಕಸಭೆಯಲ್ಲಿ ಹತ್ತು ಸೆಕೆಂಡ್ ಮಾತನಾಡಿಲ್ಲ. ಹಿರಿಯರಾದ ಎಂ.ಜಿ.ಮೂಳೆಯವರಿಗೆ ಹಳ್ಳಿಯಿಂದ ದಿಲ್ಲಿವರೆಗೆ ಓಡಾಡಿಸಿ ಹೇಳಿಕೊಳ್ಳುವಂಥ ಯಾವ ಸ್ಥಾನಮಾನವೂ ನೀಡದೆ ಅವಮಾನ ಮಾಡಿದ್ದಾರೆ. ಕಳೆದ ದಶಕಗಳಲ್ಲಿ ಮರಾಠಾ ಸಮಾಜದವರಿಗೆ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ ಸ್ಥಾನ ನೀಡಲಿಲ್ಲ ಶಾಸಕ,ಸಂಸದ,ರಾಜ್ಯಸಭಾ ಸದಸ್ಯರಾಗಿ ಮಾಡಲಿಲ್ಲ. ಜಿಲ್ಲೆಯಲ್ಲಿ ನಾಲ್ಕಾರು ಜನರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರೂ ಮರಾಠರಿಗೆ ಮಾತ್ರ ಒಂದೇ ಒಂದು ಸ್ಥಾನ ನೀಡಿಲ್ಲ.ಜೈಭವಾನಿ ಜೈಶಿವಾಜಿ ಎಂದು ಘೋಷಣೆ ಮಾಡುತ್ತ ಹೀಗೆ ಬರುತ್ತಾರೆ.ಹೀಗೆ ಹೋಗುತ್ತಾರೆ ಎಂದು ನಮಗೆ ಕೀಳಾಗಿ ಕಾಣುತ್ತಿದ್ದಾರೆ. ಭಗವಂತ ಖೂಬಾ ಅವರಿಗೆ ಈಗ ಮರಾಠಾ ಸಮಾಜದ ಬಗ್ಗೆ ನೆನಪಾಯಿತೇ? ಅವರು ಹೇಳಿದಂತೆ ಕೇಳಲು ನಾವೇನು ಅವರ ಗುಲಾಮರಾ? ಖೂಬಾ ಅವರ ಅಹಂಕಾರದ ಮಾತುಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಚೂರು ಚೂರಾಯಿತು ಎಂದು ಅಸಮಾಧಾನ ಹೊರಹಾಕಿದರಲ್ಲದೆ ನಮಗೆ ಈಗ ಯಾವ ಸ್ಥಾನಮಾನಗಳೂ ಬೇಡ.ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ೨ಎ ಮೀಸಲಾತಿ ಬೇಕು ಹೀಗಾಗಿ ನಮ್ಮ ಸಮಾಜದ ಕುರಿತು ಸಂಸತ್‌ನಲ್ಲಿ ಧ್ವನಿ ಎತ್ತಲೂ ಎಲ್ಲರೂ ಸಹಕರಿಸಿ.ಮೋರೆಯವರಿಗೆ ಗೆಲ್ಲಿಸಿ ತನ್ನಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಳಿಗ್ಗೆ ೧೨ ಗಂಟೆಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಡಾ.ದಿನಕರ ಮೋರೆ ಶಿವಾಜಿ ಪುತ್ಥಳಿ,ಡಾ.ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮುಖಾಂತರ ಚಿಕ್ಕಪೇಟ್ ಸಮೀಪದ ಲಾವಣ್ಯ ಫಂಕ್ಷನ್ ಹಾಲ್‌ಗೆ ತಲುಪಿ ಅಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆಸಿದರು.ಕೇಸರಿ ಶಾಲು ಮತ್ತು ಟೋಪಿಗಳನ್ನು ಧರಿಸಿದ ಸಾವಿರಾರು ಕಾರ್ಯಕರ್ತರು ಜಯಘೋಷಗಳನ್ನು ಕೂಗುತ್ತ ಸಾಗಿದ್ದು ವಿಶೇಷವಾಗಿತ್ತು.
ಈ ವೇಳೆ ವೇದಿಕೆ ಮೇಲೆ ಪ್ರಮುಖರಾದ ಜನಾರ್ಧನ ಬಿರಾದಾರ,ಡಾ.ಬಾಲಾಜಿ ಸಾವಳೆಕರ್,ಶರಣು ಕಡಗಂಚಿ,ಕ್ಷತ್ರಿಯ ಮರಾಠಾ ಪರಿಷತ್ತಿನ ಕಲಬುರಗಿ ಅಧ್ಯಕ್ಷರಾದ ಜಗದಾಳೆ,ರಾಹುಸಾಹೇಬ್,ರಘುನಾಥ ಜಾಧವ,ಶಿವಾಜಿ ಪಾಟೀಲ ಮುಂಗನಾಳ,ನರೇಶ ಭೋಸ್ಲೆ,ಅಂದಗರಾವ,ಆನಂದ ಪಾಟೀಲ,ಮುಸ್ಲಿಂ ಸಮಾಜದ ಮುಖಂಡರಾದ ಆಷ್ಪಾಕ್ ಪಟೇಲ್,ದಲಿತ ಮುಖಂಡ ಸ್ವಾಮಿದಾಸ ಮುದಾಳೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ