ಯಾದಗಿರಿ:ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಶೋರಾಪುರ ವಿಧಾನಸಭಾ ಉಪ ಚುನಾವಣೆಗೆ ನಿಯೋಜಿಸಿದ ವಿವಿಧ ತಂಡಗಳ ಅಧಿಕಾರಿಗಳು ಜವಾಬ್ದಾರಿಯಿಂದ-ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಯಚೂರು ಲೋಕಸಭಾ ಕ್ಷೇತ್ರದ (ಪ.ಪಂ) ಸಾಮಾನ್ಯ ವೀಕ್ಷಕರಾದ ಅಜಯ ಪ್ರಕಾಶ ಅವರು ಸೂಚಿಸಿದ್ದಾರೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಪ್ರಸಕ್ತ ಚುನಾವಣೆಗಾಗಿ ನೇಮಿಸಲಾದ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಉಪಚುನಾವಣೆಗಳಿಗಾಗಿ ನಿಯೋಜಿಸಿದ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚನೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದ ಹಾಗೆ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಚುನಾವಣೆಗಳು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಚೆಕ್ ಪೋಸ್ಟ್ಗಳಲ್ಲಿ ನಿಯಮಾವಳಿಗಳಂತೆ ಐವತ್ತು ಸಾವಿರ ಮೇಲ್ಪಟ್ಟು ಹಾಗೂ ಒಂದು ಲಕ್ಷದೊಳಗಿನ ಹಣ,ಹತ್ತು ಲಕ್ಷ ರೂ ಮೇಲ್ಪಟ್ಟು ಹಣ ಒಯ್ಯುವಂತಹ ಸಾರ್ವಜನಿಕರ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು.ವಿವಿಧ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭೇಟಿ ನೀಡಿ ನಿಗಾ ಸಹ ಇಡಲಾಗುವುದು ಎಂದು ತಿಳಿಸಿದ ಅವರು,ಅತಿ ಕಡಿಮೆ ಮತದಾನವಾಗಿರುವ ಕಡೆಗಳಲ್ಲಿ ಮತದಾನ ಹೆಚ್ಚಳಕ್ಕೆ ಗಮನ ನೀಡುವಂತೆ ಸೂಚನೆ ನೀಡಿದರು.
ಚುನಾವಣೆಗಳು ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಎಲ್ಲಾ ಎಫ್ಎಸ್ ಟಿ, ಎಸ್ಎಸ್ ಟಿ,ವಿವಿಟಿ,ಎಂಸಿಸಿ,ಸಾಮಾಜಿಕ ಜಾಲ ತಾಣಗಳ ಮೇಲಿನ ನಿಗಾ ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಅಕ್ರಮ ವಸ್ತುಗಳ, ದಾಖಲೆ ರಹಿತ ಹಣ ಸಾಗಾಣಿಕೆ ಹಾಗೂ ಬ್ಯಾಂಕುಗಳ ಮೂಲಕ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಚೆಕ್ಪೋಸ್ಟ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಅವರು ಸೂಚಿಸಿದರು.
ಚುನಾವಣೆ ಅಂಗವಾಗಿ ಮತದಾರರ ಪಟ್ಟಿ ಸಮರ್ಪಕ, ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು, ಮತಯಂತ್ರಗಳ ಅಚ್ಚುಕಟ್ಟು ನಿರ್ವಹಣೆ ,ಸಿಬ್ಬಂದಿಗಳ ವ್ಯವಸ್ಥಿತ ತರಬೇತಿ ಮೂಲಕ ಚುನಾವಣೆ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲ ಬಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ ಅವರು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಸಕಲ ಕ್ರಮ ಕೈಗೊಳ್ಳಲಾಗಿದೆ. ಎಂಸಿಸಿ ತಂಡಗಳು ಸಕ್ರಿಯವಾಗಿವೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ.