೧)
ಮಾರಿಕೊಂಡರೆ ಮತ,
ನಮಗೆಲ್ಲಿದೆ ಬೆಲೆ?
ಅಯೋಗ್ಯರು ಗೆದ್ದರೆ
ಅನೀತಿಗದು ನೆಲೆ.
೨)
ನಮ್ಮ ಒಂದು ಮತಕೆ
ಬೆಲೆ ಕಟ್ಟಲಾಗದು.
ಲೇಸು ಗೆಲ್ಲಿಸದಿದ್ರೆ
ದೇಶ ಕಟ್ಟಲಾಗದು.
೩)
ಓ ಮತ ಬಾಂಧವರೆ
ಇದು ನನ್ನ ಹಂಬಲ.
ಮಾತಿಗಿಂತ ಕೃತಿಗೆ
ನೀಡಬೇಕು ಬೆಂಬಲ.
೪)
ಎಲ್ಲರ ಮಾತುಗಳ
ಅಳೆದು ತೂಗಿ ನೋಡು.
ಒಳ ದನಿಯ ಕೇಳಿ
ಮತವ ನೀನು ನೀಡು.
೫)
ಪ್ರಜಾಪ್ರಭುತ್ವದಲ್ಲಿ
ಪ್ರಜೆಗಳೇ ಮೊದಲು.
ಮನಸ್ಸು ಮಾಡಿದರೆ
ವ್ಯವಸ್ಥೆಯೇ ಬದಲು.
೬)
ಸಿದ್ಧಾಂತಗಳ ಮೇಲೆ
ಇದ್ದರೆ ಸಾಕು ನಿಷ್ಠೆ.
ತೆಗೆದುಕೊಳ್ಳಬೇಡಿ
ವೈಯಕ್ತಿಕ ಪ್ರತಿಷ್ಠೆ.
೭)
ಮಾನವೀಯ ಸಂಬಂಧ
ಚುನಾವಣೆಗೂ ಮೇಲು.
ಜಿದ್ದಲಿ ಹೊಡೆದಾಡಿ
ಸೇರಬೇಡಿರಿ ಜೈಲು.
೮)
ಮತದಾನವೆಂಬುದು
ನಮ್ಮ ಪವಿತ್ರ ಹಕ್ಕು.
ನಾಡಿನ ಏಳಿಗೆಗೆ
ತೋರುವುದದು ದಿಕ್ಕು.
೯)
ಮಾರಿಕೊಂಡರೆ ಮತ,
ನಾಡಿಗೆಲ್ಲಿಯ ಹಿತ?!
ಯೋಗ್ಯರ ಆರಿಸಲು
ಅಭಿವೃದ್ಧಿಗೆ ಪಥ.
೧೦)
ಅವರಿವರ ಹಿಂದೆ
ಸುತ್ತಬೇಡಿ ಸುಮ್ಮನೆ.
ಯೋಚಿಸಿ ಮತ ನೀಡಿ
ಬಾಳಬೇಕು ಘಮ್ಮನೆ.
೧೧)
ಯುವಜನರೇ ಕೇಳಿ
ಲೇಸಿಗೆ ಮತ ಹಾಕಿ.
ದುಷ್ಟರ ದಾಳವಾಗಿ
ಹೊಡೆಯಬೇಡಿ ಕ್ಯಾಕಿ!
೧೨)
ಅಭಿವೃದ್ಧಿಗೆ ನಾವು
ನೀಡಬೇಕು ಆಧ್ಯತೆ.
ಆಗ ಮಾತ್ರ ಯೋಗ್ಯರು
ಗೆಲ್ಲುವಂತ ಸಾಧ್ಯತೆ.
೧೩)
ಸಜ್ಜನರು ಹೆಚ್ಚೆಚ್ಚು
ಆರಿಸಿ ಬರಬೇಕು.
ಕಾಯಿದೆ ಮಾಡುವಲ್ಲಿ
ಶ್ಯಾಣ್ಯಾರು ಇರಬೇಕು.
೧೪)
ಆಮೀಷ ಒಡ್ಡಿದರೆ
ಸ್ಪಷ್ಟ ನಿರಾಕರಿಸಿ.
ಒತ್ತಾಯದಿ ಕೊಟ್ಟರೂ,
ಮನ ಅನುಸರಿಸಿ.
೧೫)
ಜಾತಿ- ಮತವ ನೋಡದೆ
ನೀತಿಗೆ ಮತ ನೀಡಿ.
ಭೀತಿಯನ್ನು ತೊರೆದು
ದಿಟದ ಹಾಡ ಹಾಡಿ.
೧೬)
ತಪ್ಪದೇ ಮತ ಹಾಕಿ
ಯೋಗ್ಯರ ಗೆಲ್ಲಿಸೋಣ.
ಪ್ರಜಾಪ್ರಭುತ್ವವನ್ನು
ಮೇಲೆತ್ತಿ ನಿಲ್ಲಿಸೋಣ.
-ವೀರೇಶ ಬ.ಕುರಿ ಸೋಂಪೂರ