ಗದಗ ಜಿಲ್ಲೆಯ ರೋಣ ತಾಲೂಕ ಯಾವಗಲ್ಲ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರೆ ಕಳೆದ 5 ವರ್ಷಗಳ ಹಿಂದಿನಿಂದ ಮತ್ತೆ ಪ್ರಾರಂಭವಾಗಿದ್ದು 2ನೇ ಜಾತ್ರೆ ಮೇ 31 ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಜಾತ್ರೆಗೆ ಸಿದ್ದತೆ ಮಾಡಿಕೊಂಡಿದ್ದು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.ಇಲ್ಲಿನ ದ್ಯಾಮಮ್ಮ ದುರ್ಗಮ್ಮನ ದೇವಾಲಯಕ್ಕೆ ಗ್ರಾಮದಷ್ಟೆ ಹಳೆಯ ಇತಿಹಾಸವಿದೆ ಕೊನೆ ಜಾತ್ರೆ ಯಾವಾಗ ನಡೆದಿದ್ದು ಎನ್ನುವದರ ಬಗ್ಗೆ ಇಲ್ಲಿನ ಹಿರಿಯರಿಗೆ ಸರಿಯಾಗಿ ಮಾಹಿತಿ ಇಲ್ಲ.ಹಿಂದೆ ಒಮ್ಮೆ ಜಾತ್ರೆ ನಡೆದಿದೆ ಅಂತಾ ನಮ್ಮ ಅಪ್ಪ 70 ವರ್ಷಗಳ ಹಿಂದೆ ಹೇಳಿದ್ದ ನೆನಪು ಇದೆ.ಬಹಳ ವರ್ಷದ ಹಿಂದೆ 11 ವರ್ಷಕ್ಕೊಮ್ಮೆ ಜಾತ್ರೆ ಮಾಡುತ್ತಿದ್ದರಂತೆ ಹೆಳ್ತೇನಿ.ನನ್ನ ಕಾಲದಾರರಂತು ದ್ಯಾಮವ್ವನ ಜಾತ್ರೆ ನೋಡಿದ್ದೀರಲ್ಲ ಈಗ 2 ವರ್ಷಕ್ಕೊಮೆ ಮಾಡುತ್ತಾರೆ ಎಂದು 87 ವರ್ಷದ ಹಿರಿಯರೊಬ್ಬರು ಹೇಳಿದರು.
ಕೊನೆಯ ಜಾತ್ರೆ ಯಾವಗ ನೆಡೆದಿತ್ತು ಎನ್ನುವದರ ಬಗ್ಗೆ ನಾವು 70-90 ವರ್ಷಗಳಾದವರನ್ನು ಕೇಳಿದರೆ, ದ್ಯಾಮವ್ವನ ಜಾತ್ರೆ ಆಗಿದ್ದು ನೆನಪು ಇಲ್ಲ ಬಿಡಿ ಎಂದು ನಮಗೆ ಹೇಳಿದರು.
ಗ್ರಾಮದೇವಿಯರ ಮೂರ್ತಿಗಳು ಭಿನ್ನವಾಗಿದ್ದವು ಹೀಗಾಗಿ ಅವುಗಳನ್ನು ದುರಸ್ಥಿ ಮಾಡಿಸಿ ಸುಮ್ಮನೆ ಪ್ರತಿಷ್ಠಾಪನೆ ಮಾಡುವುದು ಸರಿಯಲ್ಲ ಎಂದು ಜಾತ್ರೆಯನ್ನು ಆರಂಭಿಸಿದ್ದೇವೆ ಎಂದು ದೇಗುಲ ಸಮಿತಿ ಮುಖಂಡರಾದ ಅಂದಪ್ಪ ಸವದತ್ತಿ ತಿಳಿಸಿದರು.
ಕಟ್ಟು ನಿಟ್ಟಿನ ಆಚರಣೆ:ಜಾತ್ರೆ ನಡೆಯುವ 5 ದಿನಗಳ ಕಾಲ ಗ್ರಾಮದಲ್ಲಿ ದ್ವಿಚಕ್ರ ವಾಹನದಿಂದ ಹಿಡಿದು ಯಾವ ವಾಹನವು ಸಂಚರಿಸವುದಿಲ್ಲ,ಯಾರೂ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ,ಗ್ರಾಮದೇವಿ ಕಮಿಟಿ ವತಿಯಿಂದ 5 ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.ಗ್ರಾಮಸ್ಥರೆಲ್ಲರೂ ಸೇರಿ ಒಂದೇ ಕುಟುಂಬದಂತೆ ಊಟ ಮಾಡುವುದು ಇದರ ವಿಶೇಷ. 5 ದಿನಗಳ ಕಾಲ ಗ್ರಾಮದಲ್ಲಿ ಯಾರೂ ಕಾಲಿಗೆ ಚಪ್ಪಲಿ ಹಾಕಿಕೊಂಡು ನಡೆದಾಡುವಂತಿಲ್ಲ ಜಾತ್ರೆಗೆ ಬೇರೆ ಊರಿನಿಂದ ಬಂದವರು ಬಸ್ಸು ಇಳಿದ ತಕ್ಷಣ ಒಂದು ಚೀಲದಲ್ಲಿ ತಮ್ಮ ಚಪ್ಪಲಿಯನ್ನು ಹಾಕಿಕೊಂಡು ತಮ್ಮ ಸಂಬಂಧಿಕರ ಮನೆಗೆ ತೆರಳಬೇಕು.ಅಷ್ಟೇ ಅಲ್ಲ ವೈಯಕ್ತಿಕ ಕೆಲಸಗಳಿಗೆ ಬೇರೆ ಊರುಗಳಿಗೆ ಹೋಗುವ ಗ್ರಾಮಸ್ಥರು ಅಲ್ಲಿ ವಾಸ್ಥವ್ಯ ಮಾಡುವಂತಿಲ್ಲ ಕಡ್ಡಾಯವಾಗಿ ಗ್ರಾಮಕ್ಕೆ ಮರಳಬೇಕು.ಗ್ರಾಮಸ್ಥರಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ಗ್ರಾಮ ದೇವತೆಯರಿಗೆ ತಲಾ ಒಂದು ತೊಲೆ ತೀಕಿ (ಕಂಟಾಭರಣ) ಮಾಡಿಸಿಟ್ಟಿದ್ದೇವೆ.ಇಂದಿನ ಜಾತ್ರೆ ನಿಮಿತ್ಯ ತವರ ಮನೆ ಮಹಿಳೆಯರಿಂದ ಸಂಗ್ರಹಿಸಿದ ದೇಣಿಗೆಯಿಂದ ದೇವಸ್ಥಾನ ಮುಂದೆ ತಗಡು ಹಾಕಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ರೋಣದ ತಿಳಿಸಿದರು.
5 ದಿನಗಳ ಅದ್ದೂರಿ ಆಚರಣೆ ಮೇ 31 ರಂದು ಮೆರವಣಿಗೆ ಗ್ರಾಮದೇವಿಯರ ಮೂರ್ತಿಗಳ ಪುರಪ್ರವೇಶ ಮತ್ತು ಚೌತ ಮನೆಯಲ್ಲಿ ಕೂಡಿಸುವುದು.ಜೂನ್ 1 ರಂದು ಚೌತ ಮನೆಯಿಂದ ದೇಗುಲಕ್ಕೆ ದೇವಿಯರ ಮೂರ್ತಿಗಳ ಆಗಮನ,ದಿ.2ರಂದು ಹೊನ್ನಾಟ ಮತ್ತು ವಿವಿಧ ಹೋಮಗಳು ದಿ.3 ರಂದು ಇಡೀ ದಿನ ಪೂಜೆ ಹೋಮಗಳು ನಡೆಯಲಿವೆ. ಉತ್ಸವದ ಕೊನೆಯ ದಿನವಾದ ಜೂನ್ 4 ರಂದು ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಯ ಗರ್ಭಗುಡಿಯ ಪೀಠದಲ್ಲಿ ಆಸೀನರಾಗಲಿದ್ದಾರೆ.
ಬೆಳಿಗ್ಗೆ 10.00 ಗಂಟೆಗೆ ಧರ್ಮಸಭೆ,ಸಂಜೆ 5.00ಕ್ಕೆ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ 7.00 ಗಂಟೆಗೆ ಜಾನಪದ ಕಲಾವಿದರಿಂದ ಸಂಸ್ಕೃತ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ನಿಂಗರಾಜ ತಾಳಿ