ಬೆಂಗಳೂರು:ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗವು ವಿಕಲಚೇತನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಮತ್ತು ಅನಿಯಮಿತ ಪ್ರಯಾಣಕ್ಕೆ ಮುಖ್ಯ ಮಂತ್ರಿ ಮತ್ತು ಸಾರಿಗೆ ಸಚಿವರು ಸೂಚನೆ ನೀಡಿದ್ದರೂ ಅದನ್ನು ಚಾಲನೆಗೊಳಿಸದೆ ನಿರ್ಲಕ್ಷ್ಯ ಧೋರಣೆ ವಹಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಈ ಬಗ್ಗೆ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಮುಖ್ಯಮಂತ್ರಿ ಮತ್ತು ಸಾರಿಗೆ ಮಂತ್ರಿಗಳ ಸೂಚನೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳು ವಿಕಲಚೇತನರಿಗೆ ಉಚಿತ ಮತ್ತು ಅನಿಯಮಿತ ಪ್ರಯಾಣಕ್ಕೆ ಅನುಮತಿ ನೀಡಬಹುದಾಗಿದ್ದು ಮಾನ್ಯ ಸರಕಾರವು ಆದೇಶಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದರೂ ಸಹಾ ಈ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲಿಸಿದ ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯನಿರತ ಆಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅವರು ದೂರನ್ನು ಪರಿಗಣಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.