ಹಾವೇರಿ:ಶಿಗ್ಗಾಂವ ಸವಣೂರು ಮಾದರಿ ಕ್ಷೇತ್ರ ಮಾಡುವುದು ನಮ್ಮ ಕನಸು,ಕಳೆದ ಹದಿನೈದು ವರ್ಷದ ಹಿಂದೆ ಈ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಇರಲಿಲ್ಲ ಕುಡಿಯಲು ನೀರು ಸಿಗುತ್ತಿರಲಿಲ್ಲ ಹದಿನೈದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ ಎಂದು ನೂತನ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಕಚೇರಿಗಳ ಸಂಕೀರ್ಣದ ಸಭಾಭವನದಲ್ಲಿ ನಡೆದ ಶಿಗ್ಗಾಂವ-ಸವಣೂರ ತಾಲೂಕ ಮಟ್ಟದ ಅಧಿಕಾರಿಗಳ ಪ್ರಗತಿಯ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿ
ಹಾವೇರಿ ಸಂಸದನಾಗಿರುವುದರಿಂದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದು ಶಾಸಕರು ಇಲ್ಲದಿರುವುದರಿಂದ ಅಧಿಕಾರಿಗಳು ಬೇಕಾಬಿಟ್ಟಿ ಕರ್ತವ್ಯ ನಿರ್ವಹಿಸದೆ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ಕ್ಷೇತ್ರದಲ್ಲಿ ಪ್ರಗತಿ ಏನಾಗಬೇಕು ಎಂಬುದನ್ನು ಅರಿತು ಕೆಲಸಗಳನ್ನು ಮಾಡಬೇಕಿದೆ ಎಂದು ಸೂಚನೆ ನೀಡಿದರು.ಬಡವರು, ಮಹಿಳೆಯರು,ಅಸಹಾಯಕರು,ಸರ್ಕಾರದ ಯೋಜನೆಯ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಿ,ಅವರಿಗೆ ಸಾಧ್ಯವಾದಷ್ಟು ಕಾನೂನಿನ ಮಿತಿಯಲ್ಲಿ ಸಹಾಯ ಮಾಡುವ ಕೆಲಸ ಮಾಡಿ,ಎಲ್ಲರಿಗೂ ಕಾನೂನು ಗೊತ್ತಿದೆ.ಆದರೆ,ಒಂದು ಕೆಲಸವನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟು ತಿರಸ್ಕಾರ ಮಾಡುವುದು, ಮತ್ತೊಂದು ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡುವುದು.ನಮ್ಮ ಕ್ಷೇತ್ರದಲ್ಲಿ ಮಾನವೀಯ ನೆಲೆಯಲ್ಲಿ ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡಿಕೊಡುವ ವ್ಯವಸ್ಥೆ ಇದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸವಣೂರು ಉಪವಿಭಾಗ ಅಧಿಕಾರಿ ಮಹಮ್ಮದ್ ಖಜರ್ ತಹಸೀಲ್ದಾರ ಸಂತೋಷ ಹಿರೇಮಠ,ತಾಪಂ.ಇಒ ಪಾಲಯ್ಯನಕೋಟಿ ವಿಶ್ವನಾಥ ಸೇರಿದಂತೆ ಶಿಗ್ಗಾವಿ-ಸವಣೂರು ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿಗಾರ ಮಂಜುನಾಥ ಪಾಟೀಲ,ಶಿಗ್ಗಾಂವ