ಕಲಬುರಗಿ:ಇಂಗ್ಲಿಷ್ ಮಾದ್ಯಮದ ಶಾಲೆಗಳ ಭರಾಟೆಯ ನಡುವೆ ಇಲ್ಲೊಂದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯೊಂದರಲ್ಲಿ ಜಿಲ್ಲೆ ,ಹೊರಜಿಲ್ಲೆಗಳಿಂದ ಶಿಕ್ಷಣ ಪಡೆಯಲು ಮಕ್ಕಳ ದಂಡೇ ಹರಿದುಬರುತ್ತಿದೆ. ಹೌದು ಶಿಕ್ಷಣ,ಸಂಸ್ಕಾರ, ಸ್ವಾವಲಂಬನೆಯ ಧ್ಯೇಯದೊಂದಿಗೆ 1983ರಲ್ಲಿ ಪ್ರಾರಂಭವಾದ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಗುಣಾತ್ಮಕ ಶಿಕ್ಷಣಕ್ಕೆ ಪಾಲಕರು ತಮ್ಮ ಮಕ್ಕಳಿಗೆ ಈ ಶಾಲೆಯತ್ತ ಕರೆದುಕೊಂಡು ಬರುತ್ತಿದ್ದಾರೆ. ಸದ್ಯ ಕನ್ನಡ ಮಾಧ್ಯಮದಲ್ಲಿ, ಗ್ರಾಮೀಣ ಭಾಗದಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಯಾಗಿ ಹೊರಹೊಮ್ಮತ್ತಿದೆ. ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದ ಆಡಳಿತ ಮಂಡಳಿಯ ಸಾರಥ್ಯದಲ್ಲಿ ಸಂಸ್ಥೆ ಈ ಭಾಗದಲ್ಲಿ ಜನಮನ್ನಣೆ ಗಳಿಸುತ್ತಿದೆ.
ಎಲ್ಲೆಲ್ಲಿಂದ ಮಕ್ಕಳು ಕಲಿಯಲು ಬರುತ್ತಿದ್ದಾರೆ: ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಮಕ್ಕಳು ಆಸಕ್ತಿಯಿಂದ ಕಲಿಯಲು ಬರುತ್ತಿದ್ದಾರೆ.ಅಲ್ಲದೇ ಯಾದಗಿರಿ, ರಾಯಚೂರ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದಲೂ ಮಕ್ಕಳು ಬಂದಿದ್ದಾರೆ. ದೂರದ ರಾಜಧಾನಿ ಬೆಂಗಳೂರಿನಿಂದಲೂ ಕೆಲ ಮಕ್ಕಳು ಬಂದಿದ್ದಾರೆ.ಪಕ್ಕದ ಮಹಾರಾಷ್ಟ್ರದ ಅಕ್ಕಲಕೋಟ, ಸೋಲಾಪುರದಿಂದ ಮಕ್ಕಳು ಬಂದಿದ್ದಾರೆ.
ಯಾಕೆ ಪಾಲಕರು ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ:
- ಗುರುಕುಲ ಮಾದರಿಯಲ್ಲಿ ಉತ್ತಮ ವಸತಿ ವ್ಯವಸ್ಥೆ.
- ಉತ್ತಮ ಕಲಿಕಾ ವಾತಾವರಣ.
- ಸುಸಜ್ಜಿತ ಶಾಲಾ ಕಟ್ಟಡ.
- ನುರಿತ ಬೋಧಕರ ತಂಡ.
- ಬಯಲು ಗ್ರಂಥಾಲಯ.
- ಎನ್. ಸಿ. ಸಿ ಸೌಲಭ್ಯ.
- ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ.
- ಮಲ್ಲಕಂಬದಂತಹ ಗ್ರಾಮೀಣ ಕಸರತ್ತಿನ ಕ್ರೀಡೆ ಈ ಸಂಸ್ಥೆಯ ಆಕರ್ಷಣೆಯಾಗಿದೆ.
- ವಾರ್ಷಿಕ ಕ್ರೀಡಾಕೂಟಗಳ ಆಯೋಜನೆಯ ಮೂಲಕ ಮಕ್ಕಳಲ್ಲಿ ಕ್ರೀಡೆಯ ಆಸಕ್ತಿ ಬೆಳೆಸುತ್ತಿದೆ.
- ಪ್ರತಿ ವರ್ಷ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಿರುವ ಸಂಸ್ಥೆಯಾಗಿದೆ.
- ಶಿಸ್ತು, ಸಂಸ್ಕಾರದ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
- ಪ್ರತಿ ವರ್ಷ ಶೈಕ್ಷಣಿಕ ಪ್ರವಾಸದ ಜೊತೆಗೆ ಪಠ್ಯ ಆಧಾರಿತ ಕಿರು ಪ್ರವಾಸಗಳು.
- ಪ್ರತಿ ತರಗತಿ ಕೋಣೆಗಳಿಗೆ ಸಿ. ಸಿ ಕ್ಯಾಮೆರಾ. ಮತ್ತು ಪ್ರತಿ ಕೋಣೆಗಳಿಗೆ ಪ್ರಾಜೇಕ್ಟರ್ ವ್ಯವಸ್ಥೆ ಇರುವ ಅಪರೂಪದ ಶಾಲೆಯಾಗಿದೆ.
- ಪ್ರತಿ ವರ್ಷ ಕ್ರೀಡೆಯಲ್ಲಿ ಈ ಸಂಸ್ಥೆಯ ಮಕ್ಕಳು ಕ್ರೀಡೆಯಲ್ಲಿ ವಿಭಾಗ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದಾರೆ.
- ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ವಿವಿಧ ಸ್ಪರ್ಧೆಗಳಲ್ಲಿ ಈ ಸಂಸ್ಥೆಯ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
- ಇಲ್ಲಿಯ ಆದರ್ಶ ಶಿಕ್ಷಕ ಸಿದ್ದಲಿಂಗ ಬಾಳಿ ರಾಜ್ಯ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಲಬುರಗಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
- ಹತ್ತನೇ ಮತ್ತು ಪಿ. ಯು. ಸಿ ಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಮಕ್ಕಳಿಗೆ 1 ಲಕ್ಷದ ವರೆಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ.
ಸದಾ ಒಂದಿಲ್ಲ ಒಂದು ಹೊಸತನದ ಪ್ರಯೋಗಗಳನ್ನು ಮಾಡುತ್ತಾ ಮಕ್ಕಳಲ್ಲಿ ಸೃಜನಶಿಲತೆಯ ಜೊತೆಗೆ ಕ್ರಿಯಾಶೀಲತೆಯನ್ನು ಬೆಳೆಸುತ್ತಿದೆ. ಅಣಕು ಚುನಾವಣೆ, ಮಣ್ಣೆತ್ತಿನ ಸ್ಪರ್ಧೆ, ಪರಿಸರಸ್ನೇಹಿ ಗಣೇಶನ ಮೂರ್ತಿ ತಯಾರಿಸುವ ಸ್ಪರ್ಧೆ, ಕಸದಿಂದ ರಸ, ಮಕ್ಕಳಿಂದಲೇ ಒಂದು ದಿನದ ಆಡಳಿತ, ಮಕ್ಕಳ ಸಂತೆ, ಮ್ಯಾರಾಥಾನ್ ಓಟಗಳು,ಚಟುವಟಿಕೆಗಳ ಹಾಗೂ ಪ್ರಯೋಗಗಳ ಮೂಲಕ ಪಾಠ ಬೋಧನೆ, ಜನರ ಗಮನ ಸೆಳೆದಿವೆ.
ಈ ವರ್ಷ ಸಂಸ್ಥೆಗೆ ಶಿಕ್ಷಣ ಪಡೆಯಲು ಆಗಮಿಸುತ್ತಿರುವವ ಸಂಖ್ಯೆ ಮಿತಿ ಮೀರಿದೆ. 9 ನೇ ತರಗತಿ ಒಂದರಲ್ಲೇ ಮಕ್ಕಳ ಸಂಖ್ಯೆ 200 ದಾಟಿದೆ. 8ನೇ ತರಗತಿ 180, ಹತ್ತನೇ 140 ಸಂಖ್ಯೆಯನ್ನು ಹೊoದಿದೆ. ಇನ್ನೂ ಮಕ್ಕಳು ಬರುತ್ತಲೇ ಇದ್ದಾರೆ. ಸಂಸ್ಥೆಯ ವಿವಿಧ ಪ್ರಕಲ್ಪಗಳಲ್ಲಿ ಮಕ್ಕಳ ಸಂಖ್ಯೆ 1500 ರ ಗಡಿ ದಾಟಿದೆ.
ಎಲ್ಲಿಯೂ ಸಲ್ಲದವರೂ ಇಲ್ಲಿ ಸಲ್ಲುವರಯ್ಯಾ :
ಪ್ರತಿಭಾವಂತ ಮಕ್ಕಳಿಗೆ ಪ್ರವೇಶ ಕೊಟ್ಟು ತಮ್ಮ ಶಾಲೆ 100 ಪ್ರತಿಶತ ಫಲಿತಾಂಶ ದಾಖಲಿಸಿದೆ ಎಂದು ಜಂಬದಿಂದ ಹೇಳಿಕೊಳ್ಳುವ ಶಿಕ್ಷಣ ಸಂಸ್ಥೆಗಳ ನಡುವೆ ಇದೊಂದು ಅಪರೂಪದ ಸಂಸ್ಥೆ ಆಗಿದೆ.ಸಂಸ್ಥೆಯಲ್ಲಿ ದಾಖಲಾಗುವ ಶೇ 60 ರಿಂದ 70 ರಷ್ಟು ಮಕ್ಕಳಿಗೆ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ. ಇಂತಹ ಮಕ್ಕಳಿಗೆ ಪ್ರವೇಶ ಕೊಟ್ಟು ತಿದ್ದಿ ತೀಡಿ ಇಂದು ಹಂತಕ್ಕೆ ತಂದು ಅವರಲ್ಲಿ ಸಾಮರ್ಥ್ಯ ತುಂಬುವ ಕೆಲಸವನ್ನು ಇಲ್ಲಿಯ ಶಿಕ್ಷಕರು ಆಡಳಿತ ಮಂಡಳಿಯ ಸಹಕಾರದೊಂದಿಗೆ ಮಾಡುತ್ತಿದ್ದಾರೆ. ಈ ಸಂಸ್ಥೆ ಯಾವುದರಲ್ಲೂ ಕಡಿಮೆ ಇಲ್ಲ. ಆಟ. ಪಾಠ. ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲದರಲ್ಲೂ ಎತ್ತಿದ ಕೈ. ಈಗಿನ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಆದ್ಯಾತ್ಮದ ಜೊತೆಗೆ ಶಿಕ್ಷಣದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಮಿನಿ ಸಿದ್ದಗಂಗಾ ಮಠ ಎಂಬ ಕೀರ್ತಿಗೆ ಪಾತ್ರವಾಗಿದೆ.
ಹಿಂದಿನ ಪೂಜ್ಯ ಲಿo. ಸಿದ್ದಲಿಂಗ ಮಹಾಸ್ವಾಮಿಗಳ ಶೈಕ್ಷಣಿಕ ಸೇವೆಯನ್ನು ನಾವು ಮುಂದುವರೆಸುತ್ತಿದ್ದೇವೆ. ದೂರ ದೂರದಿಂದ ವಿದ್ಯೆ ಬೇಡಿ ಬರುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಉತ್ತಮ ಶಿಕ್ಷಣ, ಸಂಸ್ಕಾರ ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಸಂಸ್ಥೆಯ ಮೇಲಿನ ಪಾಲಕರ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ
ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು,ಅಧ್ಯಕ್ಷರು ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಇವರು.
ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ವಿಭಿನ್ನ ಚಟುವಟಿಕೆಗಳು, ಶಿಕ್ಷಕರ ಕ್ರಿಯಾಶೀಲತೆ, ಮತ್ತು ಗ್ರಾಮಸ್ಥರ ಸಹಕಾರದಿಂದ ಸಂಸ್ಥೆಯ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಮಕ್ಕಳು ಈ ವರ್ಷ ದಾಖಲಾಗುತ್ತಿದ್ದಾರೆ. ಇದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎನ್ನುತ್ತಾರೆ ಡಾ. ಗುಂಡಣ್ಣ ಈ ಬಾಳಿ ಕಾರ್ಯದರ್ಶಿ ಇವರು.
ನಮ್ಮ ಶಾಲೆಯಲ್ಲಿ ಏಕೆ ಬಂದಿದ್ದೀರಿ. ಸಾಕಷ್ಟು ಶಾಲೆಗಳಿರುವಾಗ ಎಂದು ನಮ್ಮ ಶಾಲೆಯಲ್ಲಿ ಬೇರೆ ಬೇರೆ ಕಡೆಯಿಂದ ಮಕ್ಕಳನ್ನು ಸೇರಿಸಲು ಬರುವ ಎಲ್ಲಾ ಪಾಲಕರನ್ನು ಕೇಳಿದಾಗ ಅವರೆಲ್ಲರ ಸಾಮಾನ್ಯ ಉತ್ತರ ಈ ಶಾಲೆ ಚೆನ್ನಾಗಿದೆ. ನಮ್ಮ ಮಕ್ಕಳು ಇಲ್ಲಿ ಹುಷಾರಾಗುತ್ತಾರೆ. ಅನೇಕ ಜನ ಈ ಶಾಲೆ ಬಗ್ಗೆ ಹೇಳಿದ್ದಾರೆ ಎಂದು ಉತ್ತರ ಕೊಡುತ್ತಾರೆ. ಹಾಗೇ ನಮ್ಮ ಮಕ್ಕಳು ವಿಧ್ಯೆಗಿಂತ ಹೆಚ್ಚಾಗಿ ಮಠದ ಪರಿಸರದಲ್ಲಿ ಉತ್ತಮ ಸಂಸ್ಕಾರ ಕಲಿಯಲಿ ಎಂದು ಇಲ್ಲಿಗೆ ಮಕ್ಕಳನ್ನು ತಂದಿದ್ದೇವೆ ಎಂದು ಹೇಳುತ್ತಾರೆ ಸಿದ್ದಲಿಂಗ ಬಾಳಿ, ಶಿಕ್ಷಕರು.
ಕನ್ನಡ ಮಾದ್ಯಮದ ಯಾವ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಬೇಕು ಎಂಬ ಆಲೋಚನೆಯಲ್ಲಿ ಅನೇಕ ಕಡೆ ವಿಚಾರಿಸಿದಾಗ ಅನೇಕರ ಅಭಿಪ್ರಾಯ ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಎಂಬುದಾಗಿತ್ತು ಆದ್ದರಿಂದ ಇಲ್ಲಿಗೆ ಬಂದಿದ್ದೇವೆ. ಖಂಡಿತವಾಗಿಯೂ ನಮ್ಮ ಮಕ್ಕಳು ಇಲ್ಲಿ ಉತ್ತಮ ಶಿಕ್ಷಣ ಪಡೆಯುತ್ತಾರೆ ಎಂಬ ಆಶಾಭಾವನೆ ಇದೆ ಪಾಲಕರಾದ ಮಂಜುನಾಥ್ ಸ್ವಾಮಿ,ಚಿತ್ತಾಪುರ ಅವರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ