ಚಾಮರಾಜನಗರ/ಗುಂಡ್ಲುಪೇಟೆ:ಚುನಾವಣಾ ಮುನ್ನ ಘೋಷಣೆ ಮಾಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಯಾರೇ ಬದಲಾದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಾಮರಾಜನಗರ, ತಾಲೂಕು ಪಂಚಾಯತ್,ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಬ್ಲಾಕ್ ಸೊಸೈಟಿ,ಅಂಗನವಾಡಿ ನೌಕರರ ಸಂಘ ಗುಂಡ್ಲುಪೇಟೆ ಇವರ ಸಹಯೋಗದಲ್ಲಿ ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪ್ರಗತಿ ಪರಿಶೀಲನಾ ಸಮಾರಂಭ, ಸ್ತ್ರೀ ಶಕ್ತಿ ವಾರ್ಷಿಕೋತ್ಸವ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ವಿತರಣೆ ಹಾಗೂ ನಿವೃತ್ತಿ ಹೊಂದಿದ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಸರ್ಕಾರದ ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಸಾಕಷ್ಟು ತೊಡಕುಗಳು ಉಂಟಾಗುವುದು ಸಹಜ ಹಾಗಾಗಿ ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಆಗಸ್ಟ್ ತಿಂಗಳವರಗೆ ಎಲ್ಲರಿಗೂ ಗೃಹಲಕ್ಷ್ಮಿ ಹಣ ದೊರೆಯಲಿದೆ ಎಂದರು.
ತಾಲ್ಲೂಕಿನಲ್ಲಿ 60 ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯನ್ನು ನೊಂದಾಯಿಸಿಕೊಂಡಿದ್ದು ಇದರಲ್ಲಿ 4800 ಮಹಿಳೆಯರಿಗೆ ಹಣ ಬಂದಿಲ್ಲ ಎಂಬ ಮಾಹಿತಿ ಇದ್ದು ಇಂತವರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಈ ಮೂಲಕ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗುವುದು ಜೊತೆಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಗುಂಡ್ಲುಪೇಟೆ ಮಾದರಿ ತಾಲೂಕು ಮಾಡಬೇಕು ಎಂಬ ಗುರಿಹೊಂದಲಾಗಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಹೊಂಗನೂರು ಚಂದ್ರು ಮಾತನಾಡಿ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಈ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ,
ಬಡಜನರನ್ನು ಗುರಿಯಾಗಿಸಿಕೊಂಡು ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.ಶಕ್ತಿ ಯೋಜನೆಯಡಿಯಲ್ಲಿ ಸುಮಾರು 5 ಕೋಟಿ ಮಹಿಳೆಯರು ಧಾರ್ಮಿಕ ಮತ್ತು ಪ್ರವಾಸ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ.ಎಲ್ಲಾ ಮನೆಗಳಿಗೆ ಪ್ರತಿ ತಿಂಗಳಿಗೆ 200 ವ್ಯಾಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ ಹಾಗೂ ಸಮಾಜದ ಯಾವುದೇ ವ್ಯಕ್ತಿಗಳು ಹಸಿವಿನಿಂದ ಬಳಲುಬಾರದೆಂದು ಅನ್ನಭಾಗ್ಯ ಯೋಜನೆಯಡಿ ಬಿ.ಪಿ.ಎಲ್. ಪಡಿತರದಾರರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಉಪಾಧ್ಯಕ್ಷ ಪ್ರದೀಪ್ ಕುಮಾರ್,ಸದಸ್ಯರಾದ ಉಮಾಪತಿ,ರಾಜಶೇಖರ,ಎಂ.ಪ್ರದೀಪ್,ಎ.ಪಿ ಎಂ.ಸಿ ಅಧ್ಯಕ್ಷ ಬಸವರಾಜು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ತಹಸೀಲ್ದಾರ್ ಟಿ.ರಮೇಶ್ ಬಾಬು,ಸಿ.ಡಿ.ಪಿ.ಓ ಹೇಮಾವತಿ,ದ್ರಾಕ್ಷಾಯಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರುದ್ರವ್ವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗೃಹಲಕ್ಷ್ಮಿ ಅರ್ಜಿದಾರರ ಪರದಾಟ:
ಎರಡೆರಡೂ ಬಾರಿ ಅರ್ಜಿ ಸಲ್ಲಿಸಿ ಹಣ ಬಾರದೆ ಇರುವ ಅರ್ಜಿದಾರರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಾರುವಂತೆ ಇಲಾಖೆ ವತಿಯಿಂದ ಸೂಚಿಸಲಾಗಿತ್ತು.ಇದರಿಂದ ಕಾಡಂಚಿನ ಗ್ರಾಮಗಳು ಸೇರಿದಂತೆ ದೂರದ ಊರುಗಳಿಂದ
ನೂರಾರು ಮಂದಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದು ತಿಳಿದು ಕಾರ್ಯಕ್ರಮಕ್ಕೆ ಆಗಮಿಸಿದ್ದರು,ಅಂತವರು ಕೇವಲ ಸಮಾರಂಭಕ್ಕೆ ಕರೆದಿದ್ದಾರೆ ಎಂದು ಗೊಣಗಿಕೊಂಡು ಬೇಸರದಿಂದ ತೆರಳಿದರು ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ನೂರಕ್ಕೂ ಅಧಿಕ ಮಂದಿ ಮಹಿಳೆಯರಿಗೆ ಆಸನಗಳ ವ್ಯವಸ್ಥೆ ಇಲ್ಲದ ಕಾರಣ ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಗಂಟೆಗೂ ಅಧಿಕ ಕಾಲ ನಿಲುಗಾಲಿನಲ್ಲೆ ನಿಂತಿದ್ದರು,ಈ ಸಂದರ್ಭದಲ್ಲಿ ಕೆಲಮಂದಿ ಹಿರಿಯ ಮಹಿಳೆಯರು ಸಿ.ಡಿ.ಪಿ.ಓ ವಿರುದ್ಧ ಆಕ್ರೋಶ ಹೊರಹಾಕಿದರು.
ವರದಿ ಗುಂಡ್ಲುಪೇಟೆ ಕುಮಾರ್