ಹುಟ್ಟು ಸಾವು ಈ ಜಗದ ನಿಯಮ
ಕೂಡಿ ಸಾಗಲು ಬಾಂಧವ್ಯ ಸಂಗಮ
ಜೊತೆಗೆ ಇದ್ದರೆ ತಾಳ್ಮೆಯ ಸಂಯಮ
ನಮ್ಮ ಬದುಕಲಿ ನಿತ್ಯವೂ ಸಂಭ್ರಮ.
ಹುಟ್ಟು ಸಾವಿನ ಬಂಧದ ನಡುವೆ
ಇರುವುದೆಲ್ಲವ ನನಗೆ ಸಿಗಲೆನ್ನುವೆ
ಪಯಣ ತಪ್ಪದೆಂದು ತಿಳಿದ ಮನವೆ
ಕೊನೆಗೂ ಸ್ವಾರ್ಥದಂಟಿಗೆ ಸಿಲುಕುವೆ.
ನಿತ್ಯವೂ ನಿಲ್ಲದ ನಿರಂತರ ಪರದಾಟ
ಸಂಸಾರ ಬಂಧದ ನೂರಾರು ಜಂಜಾಟ
ಎಲ್ಲ ಬಲ್ಲ ನಿನ್ನಲ್ಲಿ ಇಲ್ಲವೇಕೆ ಒಡನಾಟ
ಸೃಷ್ಟಿ ಮುಂದೆ ನಡೆಯದು ನಿನ್ನ ಕಳ್ಳಾಟ.
ಈ ಬಾಳೊಂದು ಮೂರು ದಿನಗಳ ಸಂತೆ
ಕಾಲ ಉರುಳುವುದು ಅವನ ಇಚ್ಛೆಯಂತೆ
ಇಲ್ಲಿ ನಡೆಯದೇನೂ ಅವನ ವಿರುದ್ಧದಂತೆ
ಬದುಕಿ ತೋರು ಹುಸಿಯ ನುಡಿಯದಂತೆ.
ಬಂದ ಮೇಲೆ ಪಯಣವಿಲ್ಲಿ ಅನಿವಾರ್ಯ
ಬಿಡದೆ ಪಡೆದುಕೊಂಡು ಸಾಗು ಆತ್ಮಸ್ಥೈರ್ಯ
ಸಮಾಜ ಅರಿತರೆ ನಿನ್ನೊಳಗಿನ ಆಂತರ್ಯ
ಪ್ರಜ್ವಲಿಪುದು ನಿನ್ನ ಹೃದಯ ಸೌಂದರ್ಯ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು,ತುಮಕೂರು ಜಿಲ್ಲೆ.