ನನ್ನ ಅಮ್ಮ ನನಗೆ ಸ್ವರ್ಗ
ಮೊದಲ ಚಂದ್ರ ತೋರಿದಾಕೆ
ಕಂಕುಳಲ್ಲಿ ಎತ್ತಿಕೊಂಡು
ಜಗವ ಸುತ್ತಿ ನಲಿಸಿದಾಕೆ//೧//
ಅಮ್ಮ ಎಂಬ ಮೊದಲ ಪದವು
ಕರವ ಹಿಡಿದು ಬರೆಸಿದಾಕೆ
ತಪ್ಪು ಮಾಡಿದಾಗ ತಿದ್ದಿ ತೀಡಿ
ಕಿವಿಯ ಹಿಂಡಿ ಹೇಳಿದಾಕೆ//೨//
ಬೀದಿ ಜಗಳ ಮನೆಗೆ ತರಲು
ಕೋಪದಿಂದ ಬರೆ ಹಾಕಿದಾಕೆ
ಮತ್ತೆ ಎನ್ನ ಅಪ್ಪಿಕೊಂಡು
ರಮಿಸಿ ಪ್ರೀತಿ ತೋರಿದಾಕೆ//೩//
ಅಳುವ ನುಂಗಿ ನಗುವ ಚಿಮ್ಮಿ
ಎನ್ನ ಹಸಿವು ಹಿಂಗಿಸಿದಾಕೆ
ಹಳೆಯ ಸೀರೆ ನೀನು ಉಟ್ಟು
ಹೊಸದು ಅಂಗಿ ತೊಡಿಸಿದಾಕೆ/
ಅವ್ವ ನಿನ್ನ ಮಡಿಲಿನಿಂದ
ಜಗವ ಸೃಷ್ಟಿ ಮಾಡಿದಾಕೆ
ತಾಯಿಗಿಂತ ದೇವರಿಲ್ಲ
ನೀನೇ ಜಗದಿ ಹರಸಿದಾಕೆ//೫
ಕವಿ: ಹನುಮಂತರಾವ್ ನಾಗಪ್ಪಗೋಳ ಎಂ.ಎ,ಬಿಎಡ್ ಸಾಹಿತಿಗಳು.”ಆಕಾಶ ಕಾವ್ಯ”ಆಶ್ರಯ ಬಡಾವಣೆ ಗೋಕಾಕ