ಸಿಂಧನೂರು:ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಜೀವನದಲ್ಲಿ ಉತ್ತಮ ರೀತಿ-ನೀತಿ, ಸಂಸ್ಕಾರಗಳನ್ನು ರೂಢಿಸಿಕೊಂಡು ಮಾದರಿಯಾಗಬೇಕು ಎಂದು ನಿವೃತ್ತ ಮುಖ್ಯಗುರು ಹಾಗೂ ಸಾಹಿತಿ ಬೀರಪ್ಪ ಶಂಭೋಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಇಂದು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮದ ಸ್ನೇಹಸಿರಿ ಟ್ರಸ್ಟ್ ವತಿಯಿಂದ ‘ಸರ್ಕಾರಿ ಶಾಲೆ ನಮ್ಮೆಲ್ಲರ ಹೊಣೆ’ ಕಾರ್ಯಕ್ರಮದಡಿ ‘ನಿತ್ಯ ಓದು’ ಶಿರೋನಾಮೆಯಲ್ಲಿ ಸ್ನೇಹಸಿರಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜಯ ಕರ್ನಾಟಕ ಮಿನಿ ಪತ್ರಿಕೆಯ ವಿತರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡುತ್ತಾ, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿ ಮತ್ತು ಯುವ ಸಮುದಾಯ ವಿವಿಧ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ನೈಜ ಗುರಿ-ಉದ್ದೇಶಗಳಿಂದ ದೂರ ಸರಿಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಗುರುಗಳು ಮತ್ತು ಹಿರಿಯರು ಈ ಸಮಾಜಕ್ಕೆ ಬಿಟ್ಟು ಹೋಗಿರುವ ರೀತಿ-ನೀತಿ, ಸಂಸ್ಕಾರಗಳನ್ನು ರೂಢಿಸಿಕೊಂಡು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಓದಿನ ಜೊತೆಗೆ ಸಾಮಾನ್ಯ ಜ್ಞಾನ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದಿನಾಲೂ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ-ಪ್ರವಚನಗಳನ್ನು ಮನನ ಮಾಡಿಕೊಂಡು ಅಭ್ಯಾಸ ಮಾಡಬೇಕು. ಕಲಿಕೆಯಲ್ಲಿ ಏನಾದರೂ ಸಂದೇಹ, ಸಂಶಯಗಳು ಬಂದರೆ ಸಂಬಂಧಿಸಿದಂತೆ ವಿಷಯ ಶಿಕ್ಷಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಎಲ್ಲಾ ದಾಸೋಹಗಳಿಗಿಂತ ಜ್ಞಾನ ದಾಸೋಹ ಅತೀ ಮುಖ್ಯ. ಹಿರಿಯರ, ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಮುಂಬರುವ ದಿನಗಳ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಕಲಿಸಿದ ಶಿಕ್ಷಕರು ಮತ್ತು ಹೆತ್ತು-ಹೊತ್ತು ಬೆಳಿಸಿದ ಪಾಲಕರಿಗೆ ಕೀರ್ತಿ ತರುವಂತಹ ವಿದ್ಯಾರ್ಥಿಗಳು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, ಭಾಷಣದುದ್ದಕ್ಕೂ ವಿವಿಧ ಕಥೆ, ಉಪಕಥೆ, ದೃಷ್ಠಾಂತಗಳು, ನಗೆ-ಚಟಾಕೆಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಮಾತನಾಡುತ್ತಾ, ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಮತ್ತು ಸಾಮಾನ್ಯ ಜ್ಞಾನಕ್ಕೆ ಅನುಕೂಲವಾಗುವ ಮಿನಿ ವಿಜಯ ಕರ್ನಾಟಕ ಪತ್ರಿಕೆಯನ್ನು ಗ್ರಾಮದ ಸ್ನೇಹಸಿರಿ ಟ್ರಸ್ಟ್ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಇದರ ಸದುಪಯೋಗವನ್ನು ಪಡಿಸಿಕೊಂಡು ಉತ್ತಮ ಅಂಕಗಳನ್ನು ಗಳಿಸಬೇಕು. ವಿಶೇಷ ಉಪನ್ಯಾಸದಲ್ಲಿ ನೀಡಿದ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಟ್ರಸ್ಟಿನ ಅಧ್ಯಕ್ಷ ವಿಶ್ವನಾಥರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಟ್ರಸ್ಟಿನ ಒಂದಿಲ್ಲೊಂದು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ. ತಾಲೂಕು ಮತ್ತು ಪಕ್ಕದ ತಾಲೂಕುಗಳಲ್ಲಿ ಟ್ರಸ್ಟಿನ ವತಿಯಿಂದ ವರ್ಲಿ ಕಲೆಯಿಂದ ಶಾಲೆಯ ವಾತಾವರಣವನ್ನು ಅಂದ-ಚೆಂದಗೊಳಿಸಲಾಗಿದೆ. ಕೃಷಿ-ಗಣಿತ-ವಿಜ್ಞಾನ ವಸ್ತು ಪ್ರದರ್ಶನ, ವಿಶೇಷ ಉಪನ್ಯಾಸ, ಕವಿಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಅಯ್ಯನಗೌಡ, ಶಾಲೆಯ ಶಿಕ್ಷಕರಾದ ವೀರೇಶ ಗೋನವಾರ, ಎಂ.ಮಾರುತಿ, ರೂಪಾ, ಬಸವರಾಜ, ಅತಿಥಿ ಶಿಕ್ಷಕಿ ಗುರುಲಿಂಗಮ್ಮ, ಸಿಬ್ಬಂದಿಗಳಾದ ರೂಪಾ, ಮಂಜುನಾಥ, ಟ್ರಸ್ಟಿನ ಪದಾಧಿಕಾರಿಗಳಾದ ಶರಣಬಸವ ಕುಲಕರ್ಣಿ, ಅಭಿಷೇಕ ಹಿರೇಮಠ, ದುರುಗೇಶ ಹೆಚ್ ಉಪಸ್ಥಿತರಿದ್ದರು.ಭಾಗ್ಯಶ್ರೀ ಮತ್ತು ಶಾಂತಮ್ಮ ಪ್ರಾರ್ಥಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.