ಹನೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಾರ್ವಜನಿಕ ಸಂಬಂಧಿತ ಸಮಸ್ಯೆಗಳ ಕಾರ್ಯಪ್ರವೃತ್ತತೆ ಎಷ್ಟರ ಮಟ್ಟಿಗೆ ಬಗೆಹರಿದಿದೆ ಎಂದು ವಿವಿಧ ಇಲಾಖೆಯ ಕಾರ್ಯಾಲಯಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಉತ್ತರ ಪಡೆದರು.
ಸಿ.ಎಂ.ವಿರುದ್ಧ ಕೈಗೊಳ್ಳಲಾಗಿದ್ದ ಪ್ರತಿಭಟನೆ ಬಳಿಕ ಪಟ್ಟಣದ ಸೆಸ್ಕ್ ಕಛೇರಿಗೆ ಬೇಟಿ ನೀಡಿ ಈಚೆಗೆ ನಡೆಸಲಾದ ಜನ ಸಂಪರ್ಕ ಸಭೆಯಲ್ಲಿ ರಾತ್ರಿ ಪೂರ್ತಿ ಸಿಂಗಲ್ ಫೇಸ್ ವಿದ್ಯುತ್ ನೀಡುವ ಬಗ್ಗೆ ರೈತರು ಸಲ್ಲಿಸಲಾಗಿದ್ದ ಮನವಿಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಸೆಸ್ಕ್ ಕಚೇರಿ ಅಧಿಕಾರಿಗಳು ಈ ಬಗ್ಗೆ ಉತ್ತರಿಸಿ ಈಗಾಗಲೇ ತಮ್ಮ ಮನವಿ, ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರುವ ಭರವಸೆಯನ್ನು ನೀಡಿದರು.
ತಹಸೀಲ್ದಾರ್ ಕಚೇರಿಗೂ ಮುತ್ತಿಗೆ:
ಚುನಾವಣೆಗೂ ಮುನ್ನ ಡಿ.ಎಂ.ಸಮುದ್ರ ಗ್ರಾಮದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ಬೇಡಿಕೆ ಇಡಲಾಗಿದ್ದ ಕಿರು ಸೇತುವೆಗಳ ಪ್ರಗತಿ ಬಗ್ಗೆ ಪ್ರಶ್ನಿಸಿದರು.
ಈ ಬಗ್ಗೆ ತಹಸೀಲ್ದಾರ್ ಗುರುಪ್ರಸಾದ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ಪಡೆದು ಪ್ರಸ್ತುತ ಕಾಮಗಾರಿ ಪೂರ್ವಹಂತ ಪ್ರಗತಿಯಲ್ಲಿದೆ ಕೆಲವೇ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದರು. 57 ಕಾಲಂ ಪ್ರಗತಿಯ ಬಗ್ಗೆ ರೈತರು ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಅವರು ತಾಂತ್ರಿಕ ಕಾರಣಗಳ ಬಗ್ಗೆ ವಿವರಿಸಿದರು.
ನಿಗಧಿತ ಅವಧಿಗೆ ರೆಕಾರ್ಡ್ಸ್ ನೀಡಲು ಒತ್ತಾಯ:
ಕಳೆದ ಮೂರು ತಿಂಗಳಾದರೂ ಕೂಡ ರೈತರು ಕೇಳಲಾದ ರೆಕಾರ್ಡ್ಸ್ ಗಳನ್ನೂ ಅಭಿಲೇಖಾಲಯದವರು ನೀಡಲಾಗುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟರವರನ್ನು ಸ್ಥಳಕ್ಕೆ ಕರೆಸಿದ ತಹಸಿಲ್ದಾರ್ ಅವರು ಆದ್ಯತೆ ಮೇರೆಗೆ ನಿಗದಿತ ಅವಧಿಯೊಳಗೆ ರೆಕಾರ್ಡ್ಸ್ ನ್ನು ನೀಡಬೇಕು. ಇಲ್ಲದಿದ್ದರೆ ಹಿಂಬರಹ ನೀಡಬೇಕೆಂದು ಸೂಚಿಸಿದರು.
ಸಿಬ್ಬಂದಿಗಳಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ತಹಸಿಲ್ದಾರ್: ರೆಕಾರ್ಡ್ಸ್ ರೂಮ್ ಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳ ಕೊರತೆ ಇದೆ. ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಅವರು ರೈತರ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗವು ಜರುಗಿತು.
ಪಟ್ಟಣ ಪಂಚಾಯಿತಿಯವರು ಶುಚಿತ್ವಕ್ಕೆ ಒತ್ತು ನೀಡಲು ರೈತ ಸಂಘಟನೆ ಒತ್ತಾಯ:
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ.ಪಂ. ಕಾರ್ಯಾಲಯಕ್ಕೆ ತೆರಳಿ ಪಂಚಾಯಿತಿ ಸುತ್ತಮುತ್ತ ತಾಂಡವಾಡುತ್ತಿರುವ ಅನೈರ್ಮಲ್ಯ, ಶೌಚಾಲಯದ ಅಸಮರ್ಪಕ ನಿರ್ವಹಣೆ, ಪಟ್ಟಣದ ವಾರ್ಡ್ ಗಳಲ್ಲಿ ತಾಂಡವಾಡುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಕೂಡಲೇ ಸಂಬಂಧಪಟ್ಟವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಡೆಂಗ್ಯೂ ಸಾಂಕ್ರಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸುತ್ತಮುತ್ತ ಹಾಗೂ ವಾರ್ಡ್ ಗಳಲ್ಲಿ ಶುಚಿತ್ವಕ್ಕೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿದರು.
ವರದಿ:ಉಸ್ಮಾನ್ ಖಾನ್