ವಡಗೇರಾ: ತ್ಯಾಗ ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ವಡಗೇರಾ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಐದು ದಿನಗಳ ಕಾಲ ಜರುಗಿದ ಮೊಹರಂ ಹಬ್ಬ ಹಿಂದೂ ಮುಸ್ಲಿಂ ಬಾಂಧವರ-ಭಾವೈಕ್ಯತೆಗೆ ಸಾಕ್ಷಿಯಾಯಿತು. ಮೊಹರಂ ನಾಲ್ಕನೇ ದಿನವಾದ ಸೋಮವಾರ ದಿ. 9 ರಂದು ರಾತ್ರಿ ಕೆಂಡ ಹಾಯುವ (ಕತ್ತಲ್) ಕಾರ್ಯಕ್ರಮ ಜರುಗಿತು. ನೂರಾರು ಹಿಂದೂ ಮುಸ್ಲಿಂ ಯುವಕರು ಕೆಂಡದಲ್ಲಿ ಹಾಯ್ದು, ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. ಮಂಗಳವಾರ ದಿ. 10 ರಂದು ಮೊಹರಂ ಹಬ್ಬದ ಕೊನೆಯ ದಿನವಾಗಿದ್ದು, ಇಲ್ಲಿಯ ಮುಖ್ಯ ಅಗಸಿಯ ಆವರಣದಲ್ಲಿ ಜರುಗಿದ ತಾಬೂತ್ (ಪೀರ್)ಗಳ ಭೆಟ್ಟಿ ಕಾರ್ಯಕ್ರಮ ಜರುಗಿತು.
ಗ್ರಾಮೀಣ ಭಾಗದಲ್ಲಿ ಹಿಂದೂ ಮುಸ್ಲಿಂ ಜನ ಯಾವುದೇ ಜಾತಿ-ಮತ ಭೇದವಿಲ್ಲದೇ ಒಂದಾಗಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅದರಂತೆ ವಡಗೇರಾ ಗ್ರಾಮದಲ್ಲಿ ಮೊದಲಿಂದ ಬಂದ ಪರಂಪರೆಯನ್ನು-ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮೊಹರಂ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಂಡು, ಸಂಭ್ರಮಿಸಿದರೆ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಹೋಳಿ ಹಬ್ಬಗಳಲ್ಲಿ ಮುಸ್ಲಿಂ ಯುವಕರ ಭಾಗವಹಿಸಿ, ಸಂಭ್ರಮಿಸಿ ಸಂತೋಷ ಪಡುತ್ತಾರೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.
ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ -ಹಿಂದೂ-ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ