ಕಲಬುರಗಿ: ರಾಜ್ಯದ ಖಾಸಗಿ ಕಂಪನಿಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವ ವಿಧೇಯಕವನ್ನು ಕೂಡಲೇ ಮಂಡಿಸಬೇಕು ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಖಾಸಗಿ ಕಂಪನಿಗಳ ಒತ್ತಡದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದ ವಿಧೇಯಕ ಮಂಡನೆಯಿಂದ ರಾಜ್ಯ ಸರಕಾರ ಹಿಂದೆ ಸರಿಯುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕನ್ನಡ ನೆಲದಲ್ಲೇ ಕನ್ನಡಿಗರಿಗೆ ಮೀಸಲು ಕಲ್ಪಿಸಲು ಹಿಂದೇಟು ಹಾಕಿದರೆ ಹೇಗೆ,ಬೇರೆ ರಾಜ್ಯಗಳಲ್ಲಿ ಅದನ್ನು ಜಾರಿಗೆ ತರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರು ಯಾವುದರಲ್ಲೂ ಹಿಂದೆ ಉಳಿದಿಲ್ಲ.ದೇಶ ವಿದೇಶದ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ.ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ.ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವುದರಿಂದ ಖಾಸಗಿ ಕಂಪನಿಗಳಿಗೆ ಅನೂಕೂಲವೇ ಆಗಲಿದೆ.ಕನ್ನಡಿಗರಿಗೆ ಮೀಸಲಾತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಇರುವ ರಾಜ್ಯದ ಬ್ರ್ಯಾಂಡಿಂಗ್ ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಖಾಸಗಿ ಕಂಪನಿಗಳು ಬೇರೆಡೆ ಸ್ಥಳಾಂತರಗೊಳ್ಳುವುದಿಲ್ಲ. ಕಾರಣ ಸರಕಾರ ಖಾಸಗಿ ಕಂಪನಿಗಳ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿಯಬಾರದು.ಕೂಡಲೇ ಮಸೂದೇ ಮಂಡಿಸಿ ಕನ್ನಡಿಗರ ಹಿತ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
