ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪುರ ಗುಡ್ಡದಲ್ಲಿ ಚಿರತೆಯು ಆಕಳ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.
ಗ್ರಾಮದ ವಿರೂಪಾಕ್ಷ ಮೋಟನ್ನಳ್ಳಿ ಅವರ ಆಕಳು ಚಿರತೆಗೆ ಬಲಿಯಾಗಿದೆ. ಭಾನುವಾರ ದನಕರುಗಳನ್ನು ಮೇಯಿಸಲೆಂದು ಗುಡ್ಡದಲ್ಲಿ ಹೊಡೆದುಕೊಂಡು ಹೋಗಲಾಗಿತ್ತು. ಸಂಜೆ ಮನೆಗೆ ಮರಳಿ ಬಂದಾಗ ಆಕಳೊಂದು ಬಂದಿಲ್ಲ ಎಂಬುದು ಗೊತ್ತಾಗಿದೆ.
ಸೋಮವಾರ ಬೆಳಗ್ಗೆ ಮೋಟನ್ನಳ್ಳಿ ಕುಟುಂಬದವರು ಗುಡ್ಡದಲ್ಲಿ ಆಕಳನ್ನು ಹುಡುಕುತ್ತಿರುವಾಗ ಆಕಳ ಅರ್ಧ ಕಳೇಬರ ಕಂಡು ಬಂದಿದೆ.
ಕಳೆದ ತಿಂಗಳು ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.
ಹೋರಿಯ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಗುಡ್ಡದಲ್ಲಿ ಬೋನು ಆಳವಡಿಸಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಪತ್ತೆಯಾಗಿರಲಿಲ್ಲ ಈಗ ಮತ್ತೆ ಆಕಳು ಬಲಿಯಾಗಿದ್ದು, ರೈತರಿಗೆ, ಕೃಷಿಕೂಲಿಕಾರರಿಗೆ, ದನಗಾಯಿಗಳಿಗೆ ಆತಂಕವುಂಟು ಮಾಡಿದೆ.ಯಾಗಾಪುರ, ಬೆಳಗೇರಾ ಗ್ರಾಮದ ವ್ಯಾಪ್ತಿಯ ಗುಡ್ಡದಲ್ಲಿ ಚಿರತೆ ಆಕಳ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿಯೇ ಸೋಮವಾರ ಬೀಡು ಬಿಟ್ಟಿದ್ದು, ಚಿರತೆ ಸೆರೆಗೆ ಬೋನು ಅಳವಡಿಸಲಾಗುತ್ತಿದೆ ಎಂದು ಆರ್‌ಎಫ್‌ಒ ವಿಜಯಕುಮಾರ ತಿಳಿಸಿದ್ದಾರೆ.
ಆಕಳ ಸಾವಿಗೆ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಸಿಗಲಿದೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅರಣ್ಯ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಪರಿಶೀಲಿಸಲಾಗುತ್ತಿದೆ. ಚಿರತೆಯ ಚಲನವಲನ ಬಗ್ಗೆ ನಿಗಾ ಇಡಲಾಗಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೆ ಭಯ ಪಡಬಾರದು. ಗ್ರಾಮಸ್ಥರ ಜತೆಗೆ ಅರಣ್ಯ ಇಲಾಖೆ ಸಹಕಾರ ನೀಡಲಿದೆ. ಸದ್ಯಕ್ಕೆ ಅರಣ್ಯ ಪ್ರದೇಶದಿಂದ ದೂರವಿರಬೇಕು ಗುಂಪು ಗುಂಪಾಗಿ ಓಡಾಡಬೇಕು.ಒಂದು ವರ್ಷದಿಂದ ಚಿರತೆ ಯಾಗಾಪುರ-ಬೆಳಗೇರಾ ಗ್ರಾಮಗಳ ಸಮೀಪದ ಗುಡ್ಡದಲ್ಲಿ ಓಡಾಡುತ್ತಿದೆ. ಆಹಾರ ಅರಸಿ ಗುಡ್ಡದಿಂದ ಹೊರಗೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡಿಕೊಂಡು ಎಳೆದುಕೊಂಡು ಹೋಗುತ್ತಿರುವ ಘಟನೆ ನಡೆಯುತ್ತಲೇ ಇವೆ. ಗುಡ್ಡದಲ್ಲಿ ಗಿಡಮರಗಳು ಸೊಂಪಾಗಿ ಬೆಳೆದಿದ್ದರಿಂದ ಚಿರತೆ ಓಡಾಡುವುದು ಗೋಚರಿಸುತ್ತಿಲ್ಲ. ಚಿರತೆ ಸರೆಗೆ ತಂತ್ರ ರೂಪಿಸಲಾಗುತ್ತಿದೆ. ಚಿರತೆ ಬೋನಿಗೆ ಬಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವರದಿ- ಮಂಜುನಾಥ ಶಾಸ್ತ್ರೀ ಹಿರೇಮಠ