ಯಾದಗಿರಿ:ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಅಭೂತಪೂರ್ವ ಗೆಲುವಾಗಿದೆ.
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸಾಮಾಜಿಕ ನ್ಯಾಯಕ್ಕೆ ನವ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯಕ್ಕೆ ಇನ್ನಷ್ಟೂ ಬಲ ನೀಡಿದಂತಾಗಿದೆ ಎಂದು ಯಾದಗಿರಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ.ಆರ್.ಎಚ್.ಎಸ್) ಜಿಲ್ಲಾ ಕಾರ್ಯದರ್ಶಿ ಹಾಗೂ ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಕುರಕುಂದಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿದ್ದು ದೇವೀಂದ್ರ ಸಿಂಗ್ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ. ಅಂದರೆ, ಭಾರತದ ಸಂವಿಧಾನವು ಎಸ್.ಸಿಗಳಲ್ಲಿ ಒಳ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯಾಗಿದೆ.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಒಳ ಮೀಸಲಾತಿಪರ ತೀರ್ಪು ಪ್ರಕಟಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಸುಮಾರು 30 ವರ್ಷಗಳ ನಿರಂತರ ಹೋರಾಟಕ್ಕೆ ಜಯ ದೊರಕಿದೆ.
ಈ ಕಾರ್ಯಕ್ಕೆ ಶ್ರಮಿಸಿ ಹೋರಾಟ ಕೈಗೊಂಡ ಪ್ರತಿಯೊಬ್ಬ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ನೆನೆಯುತ್ತೇವೆ ಎಂದು ವಡಗೇರಾ ತಾಲ್ಲೂಕು ಅಧ್ಯಕ್ಷರಾದ ಹಣಮಂತ ಮಾಲಹಳ್ಳಿ, ಸುರೇಶ ಹಾಲಗೇರಾ, ಮರಿಲಿಂಗ ಹೊರಟುರು, ಕುಮಾರ್ ತುಮಕೂರು, ಹಣಮಂತ ಒಡ್ಕರ್ ಅವರು ತಿಳಿಸಿ ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.