ಪಾವಗಡ: ಗೋಕಾಕ್ ಹಾಗೂ ಬೆಳಗಾವಿ ಜಿಲ್ಲೆಗೆ ಪ್ರವಾಹ ಪರಿಹಾರ ಯೋಜನೆಗೆ ಸಂಪೂರ್ಣ ಸನ್ನದ್ದಾಗಿದೆ. ಈ ಬಾರಿ ಪರಿಹಾರ ಸಾಮಗ್ರಿಗಳನ್ನು, ಟಾರ್ಪಾಲು, ಅಕ್ಕಿ, ಬೇಳೆ, ಸಕ್ಕರೆ, ರವೆ, ಗೋಧಿ ಹಿಟ್ಟು, ಸಾಂಬಾರ್ ಪದಾರ್ಥಗಳು ಮತ್ತು ಸೀರೆ, ಹೊದಿಕೆ, ಪಂಚೆ, ಟವೆಲ್ ಗಳನ್ನು ಒಳಗೊಂಡ ಚೀಲಗಳನ್ನು ಇಂದು ರಾಮಕೃಷ್ಣ ಸೇವಾಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಭಕ್ತರು, ಸ್ವಯಂಸೇವಕರು ಸಿದ್ದಪಡಿಸಿದರು. ಮೊದಲ ಹಂತದಲ್ಲಿ 1000 ಚೀಲಗಳನ್ನು ಸಿದ್ದಪಡಿಸಲಾಗಿದೆ.ಉತ್ತರ ಕರ್ನಾಟಕ ಪ್ರವಾಹ ಸಂಸ್ತಸ್ಥರಿಗೆ ಆಹಾರ ಕಿಟ್ ನ್ನು ಶ್ರೀ ರಾಮಕೃಷ್ಣ ಸೇವಾಶ್ರಮ, ಟೀಂ ವಿವೇಕಾನಂದ ಕರ್ನಾಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಸ್ವಾಮಿ ಜಪಾನಂದ ಜೀ ತಿಳಿಸಿದ್ದಾರೆ.
ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ದಿನಸಿ ಮತ್ತಿತರ ಸಾಮಗ್ರಿಗಳು ಬೆಂಗಳೂರು, ಹುಬ್ಬಳ್ಳಿ, ಪಾವಗಡದ ಸಗಟು ವ್ಯಾಪಾರಿಗಳಿಂದ ಖರೀದಿ ಮಾಡಲಾಗಿದ್ದು, ಶುದ್ಧವಾದ, ಶುಚಿಯಾದ ಹಾಗೂ ಉತ್ಕೃಷ್ಟವಾದ ಪದಾರ್ಥಗಳನ್ನು ವಿತರಿಸುವುದು ಶ್ರೀ ರಾಮಕೃಷ್ಣ ಸೇವಾಶ್ರಮದ ಮೂರು ದಶಕಗಳಿಂದ ಬಂದಿರುವಂತಹ ಸಂಪ್ರದಾಯ. ಹಾಗಾಗಿ ಭಗವಂತನ ಸೇವೆಯಂತೆ ಭಾವಿಸಿ ಈ ಕಾರ್ಯ ನೆರವೇರಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ ಉತ್ತರ ಕರ್ನಾಟಕದ 5000 ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುವುದು ಎಂದರು.
ಕೇರಳ ವಯನಾಡು ಭಾಗದಿಂದ ಅನೇಕ ರೀತಿಯ ಮನವಿಗಳು ಹಾಗೂ ಅಲ್ಲಿಯ ಅಧಿಕಾರಿ ವರ್ಗದವರಿಂದ ಕೋರಿಕೆಗಳು ಬರುತ್ತಿವೆ ಆ ಪ್ರದೇಶಕ್ಕೂ ಸರಿಸುಮಾರು 5000 ಕುಟುಂಬಗಳಿಗೆ ಪರಿಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸುಮಾರು 65 ಜನರಿಗೂ ಮಿಗಿಲಾದ ಸಂತ್ರಸ್ತರಿಗೆ ಆಶ್ರಯ ನೀಡಿದ ಶಾಲೆ ಸಂಪೂರ್ಣ ಭೂಗತವಾಗಿದ್ದು ಸಂತ್ರಸ್ತರೂ ಸಹ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ನಿಜಕ್ಕೂ ದುಃಖಕರವಾದ ಸಂಗತಿ. ಮುಂಡಕ್ಕೈ ಗ್ರಾಮ, ವಯನಾಡು ಪ್ರದೇಶ ಇಲ್ಲಿಗೆ ಶಾಲೆಯನ್ನೇ ನೂತನವಾಗಿ ನಿರ್ಮಿಸಿ ಮುಂದಿನ ಪೀಳಿಗೆಗೆ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತಿರಲಿ ಎಂದು ತಿಳಿಸಿದರು.
ವರದಿ:ಕೆ.ಮಾರುತಿ ಮುರಳಿ