ಪಾವಗಡ:ನಾನು ಶಿಕ್ಷಕನಾಗಿ ಅಕ್ಷರ ಬಿತ್ತುವ ಕಾರ್ಯವನ್ನು ಮಾಡಲು ಪ್ರಥಮ ಅವಕಾಶವನ್ನು ಮಾಡಿಕೊಟ್ಟ ನನ್ನ ಸೇವಾ ಪ್ರಥಮ ಶಾಲೆ ಇದಾಗಿದ್ದು, ಇಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಶಿಕ್ಷಕರಾದ ಜಗನ್ನಾಥ್ ಅರಸು ತಿಳಿಸಿದರು.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯ ತಿಪ್ಪಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ 2001-2002 ಸಾಲಿನ 7ನೇ ತರಗತಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಹಳೆಯ ವಿದ್ಯಾರ್ಥಿಗಳು ಇಂದು ಗುರುವಂದನಾ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ.ಗುರುಗಳಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಗುರುಗಳ ಬೋಧನೆ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದಂತೆ ಆಗುತ್ತದೆ ಹಾಗೂ ವಿದ್ಯಾರ್ಥಿಗಳ ಪ್ರಗತಿಯನ್ನು ಕಂಡು ತಂದೆಯಷ್ಟೆ ಗುರುಗಳು ಹೆಮ್ಮೆ ಪಡುತ್ತಾರೆ. ವಿದ್ಯಾರ್ಥಿಗಳು ತಾವು ಕಲಿತ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ ಮುಂದಿನ ಪೀಳಿಗೆಯ ಪ್ರಗತಿಗೆ ಸಹಕಾರಿಯಾಗಬೇಕು ಎಂದರು.
ಶಿಕ್ಷಕಿ ಸಾವಿತ್ರಮ್ಮ ಮಾತನಾಡಿ, ನಮ್ಮ ಕೈ ಕೆಳಗೆ ಓದಿದ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆದು ನಮ್ಮನ್ನು ಕರೆದು ಗುರುತಿಸಿ ಈ ಒಂದು ಸನ್ಮಾನಿಸುತ್ತಿರುವುದು ತುಂಬಾ ಸಂತೋಷದ ವಿಷಯ. ನನ್ನ ವೃತ್ತಿ ಜೀವನದಲ್ಲಿ ತಿಪ್ಪಗಾನಹಳ್ಳಿ ಶಾಲೆಯನ್ನು ಮರೆಯಲು ಸಾಧ್ಯವಿಲ್ಲ. ಶಾಲಾ ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡುತ್ತಿದ್ದರು ಎಂದು ನೆನೆಸಿಕೊಂಡರು.
ಶಾಲೆಯ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ ರವರು ಮಾತನಾಡಿ,ಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸುವ ಮೂಲಕ ತಾವು ಓದಿದ ಶಾಲೆಯ ಮತ್ತು ತಮಗೆ ಪಾಠ ಮಾಡಿದ ಶಿಕ್ಷಕರಿಗೆ ಗೌರವ ನೀಡಿದ್ದಾರೆ.
ಕೆಲವು ಹಳೆಯ ವಿದ್ಯಾರ್ಥಿಗಳು ಶಾಲೆಗೆ ಈಗಾಗಲೇ ಯುಪಿಎಸ್ ಇನ್ನಿತರೆ ಪರಿಕರಗಳನ್ನು ಕೊಡಿಸಿ ಶಾಲೆಯ ಸೇವೆ ಮಾಡಿದ್ದಾರೆ.ಅದರಂತೆ ಉಳಿದ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಶಾಲೆಗೆ ಅಗತ್ಯವಿರುವ ಲ್ಯಾಪ್ ಟ್ಯಾಪ್, ಶುದ್ಧ ನೀರಿನ ಘಟಕ ಯಂತ್ರ ಇನ್ನಿತರೆಗಳನ್ನು ಕೊಡಿಸಿಕೊಡುವ ಮೂಲಕ ತಮ್ಮ ಗ್ರಾಮದ ಶಾಲೆಯ ಮತ್ತು ವಿದ್ಯಾರ್ಥಿಗಳ ಪ್ರಗತಿ ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳು ನೋಟ್ ಪುಸ್ತಕ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿದರು.
ಶಾಲೆಯ ಹಳೆಯ ಶಿಕ್ಷಕರಾದ ಜಗನ್ನಾಥ ಅರಸು, ಐ.ಎ.ನಾರಾಯಣಪ್ಪ, ಕಲಾವತಿ, ದೊಡ್ಡರಾಜು, ಬಿ.ಹೆಚ್.ಗೌಡ, ಎನ್.ನಾಗರಾಜು, ಎ.ವಿ.ರಾಜೇಶ್, ಲತಾ, ಐ.ಜಿ. ಕೃಷ್ಣ ಮೂರ್ತಿ, ಪಿ.ಅಂಜಿನೇಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಶಿಕ್ಷಕರಾದ ಶೇಖರ್, ಗ್ರಾ.ಪಂ ಸದಸ್ಯರಾದ ರಮೇಶ್, ಮುಖಂಡರಾದ ಜಿ.ಟಿ.ರೆಡ್ಡಿ, ಹಳೆಯ ವಿದ್ಯಾರ್ಥಿಗಳಾದ ರುದ್ರೇಶ್, ಹನುಮಂತರಾಯ, ಗೋಪಾಲ, ಶಿವರಾಜು, ಪುನಿತ್, ತಿಪ್ಪೇರುದ್ರ ಇತರರು ಇದ್ದರು.
ವರದಿ :ಕೆ.ಮಾರುತಿ ಮುರಳಿ