ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದಲ್ಲಿನ ಸರ್ಕಾರಿ ಟಿಂಬರ್ ಡಿಪೋ ನಲ್ಲಿ ಅಕ್ರಮವಾಗಿ ಸಾಗುವಾನಿ ನಾಟಾ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಸಾಕ್ಷ್ಯ ಗಳಿದ್ದರು ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರು ಮರ ಕಡಿದರೆ ಮುಲಾಜಿಲ್ಲದೆ ಬಂಧಿಸುವ ಅರಣ್ಯ ಇಲಾಖೆ, ತನ್ನ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಗೊತ್ತಿದ್ದರು ಕೇವಲ ಅವರನ್ನು ಬೇರೆ ವಲಯಗಳಿಗೆ ವರ್ಗಾವಣೆ ಮಾಡಿ ಕೈ ಕೊಳೆದುಕೊಂಡಿದೆ.
ಐವರು ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಒಬ್ಬ ವಲಯ ಅರಣ್ಯಾಧಿಕಾರಿ ವಿರುದ್ಧ ಗಂಭೀರ ಸಾಕ್ಷ್ಯಾಧಾರ ಸಮೇತ ಆರೋಪ ಕೇಳಿ ಬಂದಿತ್ತು.ರಾಜ್ಯದಲ್ಲಿ ಹಲವಾರು ಟಿಂಬರ್ ಡಿಪೋ ಗಳಿದ್ದರು, ಅಧಿಕಾರಿಗಳೇ ನಾಟಾ ಸಾಗಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದು ರಾಜ್ಯದಲ್ಲಿ ಎಲ್ಲೂ ನಡೆದಿರಲಿಲ್ಲ,ಮುಂಡಗೋಡ ಅರಣ್ಯ ವಲಯಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
ಶಿರಸಿ ತಾಲೂಕಿನ ಎಕ್ಕಂಬಿ ಬಳಿ ಪರವಾನಗಿ ಇಲ್ಲದೆ ಸಾಗುವಾನಿ ನಾಟಾ ಲಾರಿಯಲ್ಲಿ ಸಾಗಾಟ ಮಾಡುವ ವೇಳೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಚೆಕ್ ಪೋಸ್ಟ್ ಬಳಿ ಹಿಡಿದಿದ್ದರು, ಆರ್ ಎಫ್ ಒ ಜಿ ಟಿ ರೇವಣಕರ್ ಹಾಗೂ 5 ಜನ ಡಿ ಆರ್ ಎಫ್ ಒ ಗಳಾದ ಗುರುಚಂದ್ರ ಬ್ಯಾಳಿಯವರ,ಮಾರುತಿ ಸೊರಂಗಾವಿ, ಮಹೇಶ್ ಬೋರ್ಕರ್,ಹನುಮಂತ ಬಂಡಿವಡ್ಡರ, ಸುರೇಶ್ ವಡ್ಡರ ಎಂಬ ಅಧಿಕಾರಿಗಳನ್ನು 6 ತಿಂಗಳ ಕಾಲ ಸಸ್ಪೆಂಡ್ ಮಾಡಲಾಗಿತ್ತು,ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಗೆ ಈ ಪ್ರಕರಣ ಭಾರೀ ಇರಿಸು ಮುರುಸು ತಂದಿತ್ತು.
ಸಾಗುವಾನಿ ನಾಟಾ ಸಾಗಾಟ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ದೂರವಾಣಿ ಮೂಲಕ ಕೆನರಾ ಸರ್ಕಲ್ ನ ಶಿರಸಿ ವಿಭಾಗದ ಸಿಸಿಎಫ್ ವಸಂತ ರೆಡ್ಡಿ ಅವರನ್ನು ಸಂಪರ್ಕಿಸಿದಾಗ ಪ್ರಾಥಮಿಕ ತನಿಖೆ ನಡೆಸಿ, ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ,ಶೀಘ್ರದಲ್ಲೇ ತನಿಖಾ ಅಧಿಕಾರಿ ನೇಮಕ ಆಗಲಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಸಿಕ್ಕರೂ,ಕೆಲವರನ್ನು ಪ್ರಕರಣದಿಂದ ರಕ್ಷಿಸಬೇಕು ಎನ್ನುವ ಉದ್ದೇಶಕ್ಕೆ ಈ ರೀತಿಯಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ದ್ವಂದ್ವ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.