ಬಾಗಲಕೋಟೆ: ವಚನ ಸಾಹಿತ್ಯದ ಮೂಲಕ ಲಿಂಗ-ತಾರತಮ್ಯ, ಬಡವ-ಶ್ರೀಮಂತ, ಮೇಲು-ಕೀಳುಗಳೆಂಬ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ 11 ನೇ ಶತಮಾನದ ಆದ್ಯವಚನಕಾರ ದೇವರ (ಜೇಡರ) ದಾಸಿಮಯ್ಯನವರು ಹೊಸ ಯುಗವನ್ನೇ ಸೃಷ್ಟಿಸಿ ದೇವಭಾಷೆಯನ್ನು ಜನಭಾಷೆಯನ್ನಾಗಿ ಮಾಡಿದ್ದಾರೆ ಎಂದು ಲೇಖಕ ರಮೇಶ್ ಬಳ್ಳಾ ಹೇಳಿದರು. ಅವರು ಬಾಗಲಕೋಟೆ ವಿದ್ಯಾಗಿರಿಯ ಮಲ್ಲಪ್ಪ ಚೆನ್ನಿ ಇವರ ನಿವಾಸದಲ್ಲಿ ದೇವಾಂಗ ಸಮಾಜ ಹಮ್ಮಿಕೊಂಡಿದ್ದ ದಾಸಿಮಯ್ಯನವರ ವಚನಗಳ ಮಾಸಿಕ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ “ದಾಸಿಮಯ್ಯನವರ ವಚನಗಳಲ್ಲಿ ವೈಚಾರಿಕತೆ ಮತ್ತು ವಿಜ್ಞಾನ” ಕುರಿತು ಮಾತನಾಡಿದ ಅವರು ಹಲವಾರು ವಚನಗಳನ್ನು ಪ್ರಸ್ತಾಪಿಸಿದರು. “ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ, ಅಂಬರಕ್ಕೆ ಕಂಬ ಭೋದಿಗೆ ಇಲ್ಲದಂತಿರಿಸಿದೆ.” ಭೂಮಿಗೆ ಗುರುತ್ವಾಕರ್ಷಣೆಯ ಶಕ್ತಿ ಇದೆ ಎಂಬ ಸುಳಿವುವನ್ನು ವಚನದ ಮೂಲಕ ದಾಸಿಮಯ್ಯನವರು ನೀಡಿದ್ದಾರೆ. ಅವರು ನೇರ ಹಾಗೂ ಪ್ರಶ್ನಿಸುವ ಮನೋಭಾವ ಉಳ್ಳವರಾಗಿದ್ದರು, ವಚನಗಳಲ್ಲಿ ವಿಡಂಬನೆ, ಟೀಕೆ ಇದೆ ಹಾಗೂ ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತದೆ ಅವರು ನಿಸರ್ಗವಾದಿ, ತತ್ವಜ್ಞಾನಿಯಾಗಿದ್ದು ಎಂದು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪ್ರದೀಪ್ ಗುರೂಜಿ ರಾಮದುರ್ಗ ಅವರು ನಡೆ-ನುಡಿಗಳು ಕ್ರಿಯೆ ಜ್ಞಾನಗಳು ಒಂದಾಗಿದ್ದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ. ಅದು ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿಗೆ ಎಡೆಮಾಡಿ ಕೊಡುತ್ತದೆ ಎಂದು ಹೇಳಿದರು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎಸ್ ವಿ ಚೌಡಾಪುರ, ಮಾಸಿಕ ಚಿಂತನಗೋಷ್ಠಿಗಳ ಮೂಲಕ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕ ಅರಿವು ಉಂಟಾಗುತ್ತದೆ ಹಾಗೂ ವೈಚಾರಿಕ ಚಿಂತನೆಗಳು ಬೆಳೆಯುತ್ತವೆ ಎಂದರು. ಕುಮಾರಿ ಶುಭಾ ಚನ್ನಿ ಪ್ರಾರ್ಥನೆ ಮಾಡಿದರು, ಉಪಾಧ್ಯಕ್ಷರಾದ ಮೋಹನ್ ಗೌರೀಶ, ಶಿವಶಂಕರ ಮುತ್ತಗಿ, ಬಸವರಾಜ ಚೆನ್ನಿ, ಶಂಕ್ರಪ್ಪ ಹಳ್ಳದ, ಎಸ್,ಬಿ ಮಾಡಬಾಳ, ರವಿ ಕರ್ಜಗಿ, ವಿಠ್ಠಲ ಹಡ್ಲಗೇರಿ, ಹಾಗೂ ಮಹಿಳಾ ಮಂಡಳದ ಸದಸ್ಯರು ಚೆನ್ನಿ ಪರಿವಾರದವರು ಭಾಗವಹಿಸಿದ್ದರು. ಕಾರ್ಯದರ್ಶಿ ಸುರೇಶ ದಡ್ಡಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪ ಚನ್ನಿ ವಂದಿಸಿದರು.