ಶಿವಮೊಗ್ಗ: ದೇಶದಾದ್ಯಂತ ವೃತ್ತನಿರತ ವೈದ್ಯರ ಸುರಕ್ಷತೆಗಾಗಿ ಭಾರತ ಸರ್ಕಾರ ಕೇಂದ್ರ ರಕ್ಷಣಾ ಕಾಯ್ದೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ ಆಗ್ರಹಿಸಿದರು.
ಕೋಲ್ಕತ್ತಾದ ಆಜಿಆರ್ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿಯಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವ ಘಟನೆಯನ್ನು ವಿರೋಧಿಸಿ ಕಾಲೇಜಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿದಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದೆ. ಹೀಗಾಗಿ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದರು.
ಕಾಯಿದೆಯ ಕರಡು ರಚನೆ ಮತ್ತು ಅನುಷ್ಠಾನದ ಮೇಲ್ವಿಚಾರಣೆಗೆ ತಜ್ಞರ ಸಮಿತಿಯನ್ನು ರಚಿಸಬೇಕು. ಸಮಿತಿಯು ವೈದ್ಯಕೀಯ ಸಮುದಾಯದ ಪ್ರತಿನಿಧಿಗಳು, ಕಾನೂನು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುವುಸು ಸೂಕ್ತವಾಗಿದೆ ಎಂದರು.
ವೈದ್ಯರ ರಕ್ಷಣೆಗಾಗಿ ಕಠಿಣ ಕಾನೂನು ಶೀಘ್ರ ಜಾರಿಗೊಳಿಸಬೇಕು ಹಾಗೂ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಮಾಡಬೇಕು ಎಂದು ಆಗ್ರಹಿಸಿ, ಮನವಿಪತ್ರವನ್ನು ಕೇಂದ್ರ ಕುಟುಂಬ ಮತ್ತು ಕಲ್ಯಾಣ ಸಚಿವಾಲಯಕ್ಕೆ ರವಾನಿಸಲಾಯಿತು.
ಅಸೋಸಿಯೇಟ್ ಪ್ರೊಫೆಸರ್ ಡಾ.ಶಿಲ್ಪಾ ಶೆಟ್ಟಿ, ಪೆಥಾಲಜಿ ವಿಭಾಗದ ಡಾ.ಎಸ್.ಎಂ. ಕಾಂತಿಕರ್, ಮಕ್ಕಳ ವಿಭಾಗದ ಪ್ರೊ. ಭಾವನಾ ಮಾತನಾಡಿದರು.
ಹತ್ಯೆಗೆ ಒಳಗಾದ ವೈದ್ಯಯ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಹಚ್ಚಿ , ಒಂದು ನಿಮಿಷ ಮೌನಾಚರಣೆ ಮಾಡಿ ಪ್ರಾರ್ಥಿಸಲಾಯಿತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ