ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕೆಂದು ಪಿಎಸ್ ಐ ಮಹಿಬೂಬ ಅಲಿ ತಿಳಿಸಿದರು. ವಡಗೇರಾ ಪೋಲಿಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಬೇಕೆಂದು ಸೂಚನೆಗಳನ್ನು ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧಪಟ್ಟ ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಬೇಕು. ಸಾರ್ವಜನಿಕ ರಸ್ತೆ ಹಾಗೂ ವಾಹನ ಓಡಾಡುವ ಸ್ಥಳದಲ್ಲಿ ಶಾಮಿಯಾನ ಹಾಕಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಬಾರದು, ಗಣಪತಿ ಮೂರ್ತಿಯನ್ನು ದಿನದ 24 ಗಂಟೆಗಳು ಕಾಯಲು ಸಮಿತಿ ಸದಸ್ಯರನ್ನು ನೇಮಿಸಿ ಮುಂಜಾಗ್ರತೆ ವಹಿಸಬೇಕು. ಡಿಜೆ ಸೌಂಡ್ ಗೆ ಅನುಮತಿ ಅನುಮತಿ ಇರುವುದಿಲ್ಲ. ಸಮಿತಿ ವತಿಯಿಂದ ಸಿಡಿಮದ್ದು ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಜಾಗರೂಕತೆ ವಹಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪೆಂಡಾಲ್ ನಿರ್ಮಿಸಬೇಕು,
ನಾಗರಿಕರು ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಮನವಿ ಮಾಡಿದರು. ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಲಾಲಸಾಬ ಗೌಂಡಿ, ಸಿದ್ದಣಗೌಡ ಕಾಡಮನೋರ, ಬಸವರಾಜ ಸಾಹು ಸೊನ್ನದ, ಮಲ್ಲು ಪೋಲಿಸ್ ಪಾಟೀಲ್, ಅಬ್ದುಲ್ ಚಿಗಾನೂರ, ರಘುಪತಿ ನಾಟೇಕಾರ, ಸುದರ್ಶನ ನೀಲಹಳ್ಳಿ , ಗುರುನಾಥ ನಾಟೇಕಾರ, ಮಲ್ಲಣ್ಣ ನೀಲಹಳ್ಳಿ, ದೇವು ಜಡಿ ಹೃಷಿಕೇಶ್ ಕುಲಕರ್ಣಿ, ಮರೆಪ್ಪ ಉಳ್ಳೆಸೂಗೂರ, ಹೊನ್ನಪ್ಪ ಕಲ್ಲಪ್ಪನೋರ, ಮಂಜು ಕೋನಹಳ್ಳಿ, ಮಲ್ಲು ಜಡಿ, ನಿಂಗು ಕುರ್ಕಳ್ಳಿ, ಸೇರಿದಂತೆ ವಡಗೇರಾ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ ವಡಗೇರಾ