ಆಗಸ್ಟ್ 27 ರಂದು ಕರ್ನಾಟಕ ಲೋಕಸಭಾ ಆಯೋಗದ ಪರೀಕ್ಷೆ
ಯಾದಗಿರಿ:ಲೋಕಸೇವಾ ಆಯೋಗದ ವತಿಯಿಂದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆಯುವ ಪರೀಕ್ಷೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯ ಕುರಿತ ಸಭೆ ನಡೆಸಿ ಅವರು ಮಾತನಾಡಿದರು.
ಯಾದಗಿರಿ ನಗರದ ಪದವಿ ಕಾಲೇಜು, ನಗರದ ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗ, ಸರಕಾರಿ ಮಹಿಳಾ ಪಿಯು ಮತ್ತು ಬಾಲಕರ ಪಿಯು ಕಾಲೇಜು (ಸ್ವಪ್ನಾ ಗ್ರೌಂಡ್), ಆದರ್ಶ ಮಹಾವಿದ್ಯಾಲಯದ ಒಟ್ಟು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 1542 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
2023ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳು ಆ. 27ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ರಿಂದ ಸಾಯಂಕಾಲ 4 ಗಂಟೆಯವರೆಗೆ ಪತ್ರಿಕೆ- 2 ಪರೀಕ್ಷೆಗಳು ಎರಡು ಪಾಳಿಯಲ್ಲಿ ನಡೆಯಲಿದೆ. ಜಿಲ್ಲೆಯ ಮುಖ್ಯ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯೋಗವು ನೀಡಿರುವ ಮಾರ್ಗಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ತಪಾಸಣಾ ಸಿಬ್ಬಂದಿ ಮೊದಲ ಹಂತದಲ್ಲಿ ಮುಖ್ಯಗೇಟ್ ಬಳಿಯೇ ನಿಲ್ಲಿಸಿ ತಪಾಸಣೆ ಮಾಡಿದ ನಂತರವೇ ಒಳಗೆ ಬಿಡಬೇಕು. ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ಎಲ್ಲಾ ಅಭ್ಯರ್ಥಿಗಳ ಗುರುತಿನ ಚೀಟಿ, ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ಅವರುಗಳ
ಅಭ್ಯರ್ಥಿತ್ವದ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸಬೇಕು ಎಂದರು. ಪರೀಕ್ಷಾ ಕೊಠಡಿಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳು ಪರೀಕ್ಷಾ ಪ್ರಕ್ರಿಯೆ, ಅಭ್ಯರ್ಥಿಗಳ ಹಾಗೂ ಸಂವೀಕ್ಷಕರ ಚಲನವಲನ, ಮುಖಚಹರೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು. ಪರೀಕ್ಷಾ ಉಪಕೇಂದ್ರಗಳಿಗೆ ಜಾಮರ್ ಅಳವಡಿಸಬೇಕು ಎಂದರು.
ಪರೀಕ್ಷಾ ಕೊಠಡಿಗಳಲ್ಲಿ ಲೈಟ್ ಹಾಗೂ ಫ್ಯಾನ್ ವ್ಯವಸ್ಥೆ, ಕುಡಿಯುವ ನೀರು, ಗಡಿಯಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮಾರ್ಗಾಧಿಕಾರಿಗಳೂ ಪರೀಕ್ಷಾ ಪೂರ್ವ ದಿನದಂದು ಉಪಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲಿಸಿ ವರದಿ ಮಾಡಬೇಕು ಎಂದರು.
ಜಿಲ್ಲಾ ತ್ರಿಸದಸ್ಯರ ಸಮಿತಿಯ ಉಸ್ತುವಾರಿಯಲ್ಲಿ ಪರೀಕ್ಷೆಗೆ ಸಂಬಂಧ ಪಟ್ಟ ಗೌಪ್ಯ ಸಾಮಾಗ್ರಿಗಳನ್ನು ಜಿಲ್ಲಾ ಖಜಾನೆಯ ಸುಪರ್ದಿಯಲ್ಲಿಡಬೇಕು, ಪರೀಕ್ಷಾ ದಿನದಂದು ಸೂಕ್ತ ಬಂದೋಬಸ್ತ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ರವಾನಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ, ತಹಶೀಲ್ದಾರ ಸುರೇಶ ಅಂಕಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ವಿಷಯ ಪರಿವೀಕ್ಷಕ ಬಸನಗೌಡ ಆಲ್ದಾಳ, ಹಣಮಂತ ಹೆಚ್, ಪ್ರಾಂಶುಪಾಲರಾದ ನಿರ್ಮಲಾ, ರುದ್ರಗೌಡ, ದೇವಿಂದ್ರಪ್ಪ, ಶರಣಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ