ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯಾದ್ಯಂತ ರಾಜ್ಯದಿಂದ ಆಂಧ್ರಪ್ರದೇಶದ ಗ್ರಾಮಗಳಿಗೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವ ದಂಧೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ದೊಡ್ಡಹಳ್ಳಿಯ ರಂಗನಾಥ ವೈನ್ಸ್ ನಿಂದ 23 ಕೇಸ್ ವೈನ್ ಬಾಟಲಿಗಳನ್ನು ತುಂಬಿಕೊಂಡ ಕೆ.ಎ.09ಎನ್2537 ಕಾರು ವೈ.ಎನ್.ಹೊಸಕೋಟೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ವೇಳೆ ಅನುಮಾನಗೊಂಡ ಪತ್ರಕರ್ತರು ನೋಡಿದಾಗ ಅದರಲ್ಲಿದ್ದ ಒಬ್ಬ ಸರಕು ಎಂದು ತೋರಿಸುತ್ತಿರಲು ಡ್ರೈವರ್ ಕಾರನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ತಕ್ಷಣವೇ ಮಾಹಿತಿಯನ್ನು ಪಾವಗಡ ಅಬಕಾರಿ ಅಧಿಕಾರಿಗಳಿಗೆ ಪೋನ್ ಮಾಹಿತಿ ನೀಡಲಾಗಿದೆ. ಪ್ರಸ್ತುತ ನಾನು ರಜೆ ಮೇಲೆ ಇದ್ದು, ಬಂದ ತಕ್ಷಣ ಮಾಹಿತಿ ಮತ್ತು ಆಧಾರಗಳನ್ನು ಪರಿಶೀಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ತಾಲ್ಲೂಕು ಅಬಕಾರಿ ಅಧಿಕಾರಿ ತಿಳಿಸಿದ್ದಾರೆ.
ಹೋಬಳಿಯಲ್ಲಿ ರಾಜ್ಯದ ಗಡಿಭಾಗದಲ್ಲಿನ ಹಳ್ಳಿಗಳಲ್ಲಿ ಯತೇಚ್ಚವಾಗಿ ಅಕ್ರಮವಾಗಿ ಮಧ್ಯ ಮಾರಾಟ ಕಂಡುಬರುತ್ತಿದೆ. ಕಾರು, ಜೀಪು, ಆಟೋಗಳಲ್ಲಿ ಮಧ್ಯ ಸರಬರಾಜು ಯತೇಚ್ಚವಾಗಿ ಮತ್ತು ರಾಜಾರೋಷವಾಗಿ ನಡೆಯುತ್ತಾ ಹಳ್ಳಿ ಹಳ್ಳಿಯ ಗೂಡಂಗಡಿಗಳಿಗೂ ಸೇರುತ್ತಿದೆ. ಯುವಜನತೆ ಕುಡಿತಗಳಿಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ಕಳ್ಳತನ, ಹೊಡೆದಾಟ, ಕುಟುಂಬ ಕಲಹ ಇನ್ನಿತರೆ ಘಟನೆಗಳಿಗೆ ಸಾಕ್ಷಿಯಾಗುತ್ತಾ, ಆತ್ಮಹತ್ಯೆಯಂತಹ ಘಟನೆಗಳೂ ಸಹಾ ನಡೆಯುತ್ತಿವೆ. ರಾತ್ರೋ ರಾತ್ರಿ ಆಂದ್ರಿಗರು ಗಡಿಹಳ್ಳಿಗಳಿಗೆ ಬಂದು ಹೋಗುವುದು, ದಾಂದಲೆ ಮಾಡುವುದು ಕಳ್ಳತನ ದೌರ್ಜನ್ಯವೆಸಗುವುದು ಕಂಡುಬರುತ್ತಿವೆ. ಇವುಗಳಿಗೆಲ್ಲಾ ಮೂಲ ಕಾರಣ ಮಧ್ಯಸೇವನೆಯಾಗಿದ್ದು, ಸಂಬಂಧಿಸಿದ ಇಲಾಖೆಯವರು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಂಡು ಗಡಿಗ್ರಾಮಗಳ ನೆಮ್ಮದಿಯನ್ನು ಕಾಪಾಡಬೇಕು ಎಂದು ಗ್ರಾಮೀಣ ಮಹಿಳೆಯರು ಮತ್ತು ನಾಗರೀಕರು ಒತ್ತಾಯಿಸಿದ್ದಾರೆ.
ನೀರಿಗೆ ಬರ ಇರುವ ಪಾವಗಡ ತಾಲ್ಲೂಕಿನ ಪ್ರತಿಹಳ್ಳಿ ಸೇರಿದಂತೆ ಕುಗ್ರಾಮಗಳಲ್ಲಿ ಮದ್ಯಕ್ಕೆ ಬರವಿಲ್ಲ. ಸಂಜೆಯಾದರೆ ಸಾಕು ಕುಡುಕರದ್ದೇ ಹಾವಳಿ. ಮನೆಗಳಲ್ಲಿ ಇನ್ನಿಲ್ಲದ ರಂಪಾಟ. ಹಣಗಳಿಕೆ ನಿಟ್ಟಿನಲ್ಲಿ ಹಳ್ಳಿಗಳ ವಾತಾವರಣ ಹಾಳಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಲಕ್ಷ್ಮಣ ಮೂರ್ತಿ, ಚಿಕ್ಕಜಾಲೋಡು ಅವರು.
ವರದಿ.ಕೆ.ಮಾರುತಿ ಮುರಳಿ