ಶಿವಮೊಗ್ಗ/ತೀರ್ಥಹಳ್ಳಿ: ಅಡಿಕೆಯ ಸಾಂಪ್ರದಾಯಿಕ ಸಂಸ್ಕರಣಾ ಪದ್ಧತಿಯಲ್ಲಿ ವ್ಯತ್ಯಯವಾದರೆ ಗುಣಮಟ್ಟದಲ್ಲಿ ಏರುಪೇರಾಗಲಿದೆ. ಉತ್ತಮ ಧಾರಣೆಗಾಗಿ ರಾಜಿ ಮಾಡಿಕೊಳ್ಳದೆ ಸಂಸ್ಕರಣ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸಲಹೆ ನೀಡಿದರು.
ಮಂಗಳವಾರ ಇಲ್ಲಿ ನಡೆದ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ, ಶರಾವತಿ, ಪತ್ತಿನ ಸಹಕಾರ ಸಂಘ, ಸಮೃದ್ಧಿ ಪ್ಲಾಂಟೇಷನ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಡಿಕೆ ಗುಣಮಟ್ಟ ಕಳಪೆಯಾಗಿದ್ದ ಕಾರಣ ಉತ್ತರ ಭಾರತದಿಂದ 1,000 ಲೋಡ್ ಅಡಿಕೆ ವಾಪಸಾಗಿದೆ. ಚಾಲಿ ಅಡಿಕೆ ಪಾಲಿಷ್ ಮಾಡಿ ನೀರಿನಲ್ಲಿ ಬೇಯಿಸಿ ರೆಡ್ ಆಕ್ಸೆಡ್‌ನಲ್ಲಿ ಮಿಶ್ರಣ
ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ವಿವಿಧ ರೀತಿಯಲ್ಲಿ ಕಲಬೆರಕೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಧಾರಣೆ ಕುಸಿತದ ಆತಂಕ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಡಿಕೆ ಗುಣಮಟ್ಟ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಡಿಕೆ ಬೆಲೆ ಕುಸಿದರೆ ಮಲೆನಾಡಿಗರ ಬದುಕು ನಾಶವಾಗಲಿದೆ. ಸಹಕಾರ ಸಂಸ್ಥೆ, ಎಪಿಎಂಸಿ ಮುಂತಾದ ಮಾರಾಟ ವ್ಯವಸ್ಥೆಗೆ ರೈತರು ನೆರವಾಗಬೇಕು. ಕಲಬೆರಕೆ ವಿರುದ್ಧ ಬೆಳೆಗಾರರು ಧ್ವನಿಯಾಗಬೇಕು ಎಂದು ಎಚ್ಚರಿಸಿದರು.
ಪಾರದರ್ಶಕ ವ್ಯವಹಾರ ಸಹಕಾರ ಸಂಸ್ಥೆಯ ಮುಖ್ಯ ಉದ್ದೇಶ. ಯಾವುದೇ ತಪ್ಪಿದ್ದರೂ ಷೇರುದಾರ ಸದಸ್ಯರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದು. ದುರುದ್ದೇಶದ ಟೀಕೆಗೆ ಅವಕಾಶ ಇಲ್ಲ ಎಂದು ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.
ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ. ಅಜಿತ್, ಸಮೃದ್ಧಿ ಪ್ಲಾಂಟೇಷನ್ ಸಹಕಾರ ಸಂಘದ ಅಧ್ಯಕ್ಷೆ ರೇವತಿ ಅನಂತಮೂರ್ತಿ, ನಿರ್ದೇಶಕರಾದ ಬಿ.ಕೆ.ಅರುಣ್‌ಕುಮಾರ್, ಸೀಕೆ ಪ್ರಸನ್ನ ಕುಮಾರ್, ಈಚಲುಬೈಲು ಶಶಿಧರ್ ಕೊಲ್ಲೂರಯ್ಯ, ವಿನಂತಿ ಕರ್ಕಿ, ಎಂ ಡಿ ಚಂದ್ರಕಲಾ ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ