ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.
ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ ಮಾಹಿತಿಯು ಮಾತ್ರ ತಿಳಿದಿದೆ. ಅದ್ಭುತಗಳಲ್ಲಿ ಮೆದುಳು ಉನ್ನತ ಸ್ಥಾನದಲ್ಲಿದ್ದು ಕೇವಲ ಅರ್ಧ ಕಿಲೋ ಗ್ರಾಂ ಇರುವ ಅಂಗದ ರಚನೆ ಮತ್ತು ಕಾರ್ಯವೈಖರಿ ಊಹಿಸಲಾರದಷ್ಟು ರೋಚಕವಾಗಿದೆ. ಹತ್ತು ಸಾವಿರ ಕೋಟಿ ನರಕೋಶಗಳಗೆ ನಡೆಯುವ ರಾಸಾಯನಿಕ ಕ್ರಿಯೆಗಳು, ಈ ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುವ ನರವಾಹಕಗಳು ನಮ್ಮ ನಡೆ,ನುಡಿ ಮತ್ತು ಭಾವನೆಗಳನ್ನು ನಿರ್ಧರಿಸುತ್ತವೆ. ತನ್ನ ಬಗ್ಗೆ ಆಲೋಚಿಸುವ ತನ್ನ ರಚನೆ, ಕಾರ್ಯ ವಿಧಾನ ಮತ್ತು ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯು ಮೆದುಳಿಗೆ ಮಾತ್ರ ಇದೆ. ಕೆಲವೊಮ್ಮೆ ಹತೋಟಿಗೆ ಸಿಗುವ, ಮತ್ತೊಮ್ಮೆ ಹತೋಟಿಗೆ ಸಿಗದ ನಮ್ಮ ಮನಸ್ಸಿನ ಕೇಂದ್ರವು ಮೆದುಳು ಆಗಿದೆ. ಅದೇ ಮೆದುಳಿಗೆ ಸ್ವಲ್ಪ ಹಾನಿಯಾದರೂ ಮನುಷ್ಯನು ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಹೃದಯ ಬಡಿತ, ಉಸಿರಾಟ ಮತ್ತು ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಹತ್ತು ಸಾವಿರ ಕೋಟಿಗೂ ಹೆಚ್ಚು ನರಕೋಶಗಳು ಸದಾ ಚುರುಕಾಗಿ ಕೆಲಸ ಮಾಡುವ ಸಾಮರ್ಥ್ಯಯಿದ್ದರೂ ಅಷ್ಟೇ ಸೂಕ್ಷ್ಮವಾಗಿದೆ. ತಲೆಗೆ ಪೆಟ್ಟು ಬಿದ್ದ ಸಂಧರ್ಭದಲ್ಲಿ ಮೆದುಳಿಗೆ ಹಾನಿಯುಂಟಾದರೆ ಸರಿಯಾಗಲು ಬಹಳ ಸಮಯವು ಹಿಡಿಯುತ್ತದೆ. ಕಾರಣ ಮೆದುಳಿನ ನರಕೋಶಗಳಿಗೆ ಸರಿ ಮಾಡಿಕೊಳ್ಳುವ ಸಾಮರ್ಥ್ಯವು ತುಂಬ ಕಡಿಮೆಯಿದ್ದು ಸರಿ ಹೋಗಲು ಸಹಾಯಕವಾಗುವ ಯಾವುದೇ ಔಷಧಿಗಳಿಲ್ಲ. ಈ ಮೆದುಳು ಎಷ್ಟು ಚುರುಕಾಗಿದೆಯೆಂದರೆ ದೇಹದ ಅಂಗಾಂಗಳಿಗೆ ತಮ್ಮ ಕೆಲಸದ ಸಂದೇಶವನ್ನು ತಿಳಿಸುತ್ತದೆ. ಭಾರತೀಯರು ಮನಸ್ಸು ಮತ್ತು ಆತ್ಮದ ಕುರಿತು ತಿಳಿಸಿದರೆ ಗ್ರೀಕರು ಮೆದುಳಿನ ಕುರಿತು ತಿಳಿಸುವ ಪ್ರಯತ್ನವನ್ನು ಮಾಡಿದರು. ಕೆಲವು ಜನರು ತಲೆ ದಪ್ಪವಿದ್ದರೆ ಹೆಚ್ಚು ಬುದ್ಧಿವಂತರು ಎಂಬ ತಪ್ಪು ಭಾವನೆಯನ್ನು ಹೊಂದಿದ್ದಾರೆ. ಪ್ರತಿಭಾವಂತರ ಮೆದುಳನ್ನು ಸಾಮಾನ್ಯ ಜನರ ಮೆದುಳಿಗೆ ಹೋಲಿಸಿದರೆ ಅಂತಹ ವಿಶೇಷತೆ ಏನು ಇಲ್ಲ. ಅತ್ಯಂತ ಸೂಕ್ಷ್ಮವಾದ, ಅಷ್ಟೇ ಭದ್ರತೆಯನ್ನು ಬಯಸುವ, ಸ್ವಲ್ಪ ಹಾನಿಯಾದರೂ ತಡೆದುಕೊಳ್ಳದ ನಮ್ಮ ಮೆದುಳು ಜೀವಂತವಿರುವಾಗ ಬಹಳ ಮೃದುವಾಗಿರುತ್ತದೆ. ಅತ್ಯಂತ ಪ್ರಭಾವಶಾಲಿಯಾದರೂ ತುಂಬ ದುರ್ಬಲವಾಗಿರುವ ನಮ್ಮ ಮೆದುಳನ್ನು ಪೃಕೃತಿಯು ತಲೆಯ ಮೇಲಿನ ಕೂದಲು ರಾಶಿ, ಚರ್ಮ, ಸ್ನಾಯುವಿನ ಸೆಳೆತ,ತಲೆ ಬುರುಡೆ, ಮೂರು ಪೊರೆಗಳಿಂದ ಸುತ್ತುವರೆದಿರುವ ಏಳು ಸುತ್ತಿನ ಕೋಟೆಯನ್ನು ನಿರ್ಮಿಸಿದೆ. ಅಪಾರ ಪ್ರಮಾಣದ ಸಾಮರ್ಥ್ಯವನ್ನು ಹೊಂದಿರುವ ನಮ್ಮ ಮೆದುಳು ಕೂಡ ಒಂದೇ ಜೀವಕೋಶದಿಂದ ತನ್ನ ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ. ಆದರೂ ಪುರುಷರ ಮತ್ತು ಸ್ತ್ರೀಯರ ಮೆದುಳಿಗೆ ಏನಾದರೂ ವ್ಯತ್ಯಾಸವಿದೆಯೇ ಎನ್ನುವ ಪ್ರಶ್ನೆಯು ಇನ್ನೂ ಹಲವರ ಮನಸ್ಸಿನಲ್ಲಿ ಇಂದಿಗೂ ಪ್ರಶ್ನೆಯಾಗಿದೆ. ಇದು ತಪ್ಪು ಕಲ್ಪನೆ ಪುರುಷರ ಮತ್ತು ಸ್ತ್ರೀಯರ ಮೆದುಳಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಬುದ್ಧಿವಂತಿಕೆಯಲ್ಲಿ ಸ್ತ್ರೀ ಪುರುಷರು ಇಬ್ಬರೂ ಸಮಾನವಾಗಿದ್ದಾರೆ. ಸಾಧಾರಣ ಬುದ್ಧಿವಂತರ ಮತ್ತು ಮೇಧಾವಿಗಳ ಮೆದುಳಿನ ಗಾತ್ರದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಮೇಧಾವಿಗಳ ಮೆದುಳನ್ನು ಮತ್ತು ಸಾಮಾನ್ಯ ಜನರ ಮೆದುಳನ್ನು ಒಂದು ಕಡೆ ಸೇರಿಸಿದರೆ ಯಾರ ಮೆದುಳು ಯಾವುದು ಎಂದು ಹೇಳುವುದು ಕಷ್ಟವಾಗುತ್ತದೆ. ಮೇಧಾವಿಗಳ ಮೆದುಳಿನ ಯಾವುದೇ ಭಾಗವು ವಿಶೇಷವಾಗಿ ಬೆಳೆದಿರುವುದಿಲ್ಲ. ಬುದ್ಧಿ, ಶಕ್ತಿ, ಸಾಮರ್ಥ್ಯಗಳ ಆಧಾರದ ಮೇಲೆ ಮೇಲೆ ಮೇಧಾವಿತನ ನಿರ್ಧಾರವಾಗುತ್ತದೆ. ನಾವುಗಳೆಲ್ಲರೂ ಸ್ಥಿರವಾಗಿ ಒಂದು ಕೆಲಸದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಹೊಂದಿ ಕೊಂಡ ನಂತರ ನಮ್ಮ ಮೆದುಳಿಗೆ ಹೆಚ್ಚು ಕೆಲಸವನ್ನು ಕೊಡುವುದಿಲ್ಲ. ಸ್ವಲ್ಪ ರಮ್ ಹಾಕಿದರೆ ನನ್ನ ಮೆದುಳು ಚುರುಕಾಗಿರುತ್ತದೆ ಎನ್ನುವರು ಕೆಲವರಾದರೆ,ವಿಸ್ಕಿ ತೆಗೆದುಕೊಂಡರನೇ ನನಗೆ ಕಥೆ, ಕವನಗಳನ್ನು ಬರೆಯಲು ಸಾಧ್ಯವಾಗುತ್ತದೆ ಎನ್ನುವವರು ಇದ್ದಾರೆ. ಆಲ್ಕೋಹಾಲ್ ಆಗಲಿ, ಇತರೆ ಮಾದಕ ಪದಾರ್ಥಗಳು ಮೆದುಳು ಮತ್ತು ಮನಸ್ಸನ್ನು ಪ್ರಚೋದಿಸುತ್ತವೆ ಎಂಬ ನಂಬಿಕೆಯನ್ನು ಹಲವಾರು ಜನರ ಮನಸ್ಸಿನಲ್ಲಿ ಇದೆ. ಆದರೆ ಇದು ತಪ್ಪು ಕಲ್ಪನೆಯಾಗಿದ್ದು ವಾಸ್ತವದಲ್ಲಿ ಅಲ್ಕೋಹಾಲ್,ಇತರೆ ಮಾದಕ ಪದಾರ್ಥಗಳಾಗಲಿ ಮೆದುಳನ್ನು ಕುಗ್ಗಿಸುವ ರಾಸಾಯನಿಕವಾಗಿವೆ. ಅಲ್ಲದೇ ದೀರ್ಘಕಾಲದಲ್ಲಿ ಅದು ಮೆದುಳಿಗೆ ಮಾರಕವಾಗುತ್ತದೆ. ಮೀನು, ಬೆಂಡೆಕಾಯಿ, ಪ್ರೋಟೀನ್, ವಿಟಮಿನ್ ಇರುವ ಯಾವುದೇ ಆಹಾರ ಪದಾರ್ಥಗಳ ಸೇವನೆಯಿಂದ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು ಆಗಲಿ, ಆದ ಹಾನಿಯನ್ನು ಸರಿಪಡಿಸುವ ಯಾವುದೇ ಔಷಧಗಳಿಲ್ಲ. ಇಂತಹ ಅಸಂಖ್ಯ ಕಾರ್ಯ ಚಟುವಟಿಕೆಗಳನ್ನು ಹೊಂದಿರುವ ನಮ್ಮ ಮೆದುಳನ್ನು ಕಾಪಾಡಿಕೊಳ್ಳುವುದು ಪ್ರಮುಖ ಕರ್ತವ್ಯವಾಗಿದೆ. ಏಕೆಂದರೆ ಮೆದುಳಿಗೆ ತನ್ನನ್ನು ತಾನು ರಿಪೇರಿ ಮಾಡಿಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ದೇಶದ, ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ದ್ವೀಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಹೇಳುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಎಚ್ಚೆತ್ತು ಕೊಳ್ಳುವುದು ಒಂದೇ ಮಾರ್ಗವಾಗಿದೆ.
ಸಂದೀಪ ಜೋಶಿ,
ಗಂಗಾವತಿ
