ಕೊಪ್ಪಳ/ಕನಕಗಿರಿ: ಮಳೆಗಾಲ ಮುಗಿಯುತ್ತಾ ಬಂದಿದ್ದು, ಕನಕಗಿರಿ ತಾಲೂಕಿನ ಕೆರೆ ತುಂಬಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಆರೋಪಿಸಿದ್ದಾರೆ.
ತುಂಗಭದ್ರ ನದಿಯಿಂದ ಕನಕಗಿರಿ ವಿಧಾನಸಭೆ ಕ್ಷೇತ್ರದ ಸುಮಾರು 10 ಕ್ಕೂ ಹೆಚ್ಚು ಕೆರೆ ತುಂಬಿಸುವ ಯೋಜನೆ ಅನುಷ್ಠಾನವಾಗಿದೆ. ಈ ಯೋಜನೆ ಜಾರಿ ಮಾಡಿದ್ದಾಗಿ ಸಚಿವ ಶಿವರಾಜ ತಂಗಡಗಿ ಸಾಕಷ್ಟು ಪ್ರಚಾರ ತೆಗೆದುಕೊಂಡಿದ್ದಾರೆ. ಅವರ ಬೆಂಬಲಿಗರು ಅವರನ್ನು ಭಗೀರಥ ಎಂದೆಲ್ಲಾ ಕೊಂಡಾಡುತ್ತಿದ್ದಾರೆ ಆದರೆ, ವಾಸ್ತವದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸರಿಹಾಳ, ಗೌರಿಪುರ ಮತ್ತು ಲಾಯದುಣಸಿ ಕೆರೆಗೆ ಒಂದು ಹನಿ ನೀರು ಕೂಡಾ ಬಂದಿಲ್ಲ. ಈ ಬಾರಿ ಮಳೆ ಪ್ರಮಾಣ ತೀರಾ ಕಡಿಮೆ ಇದ್ದು, ಕೆರೆ ತುಂಬಿದರೆ ಮಾತ್ರ ಬೇಸಿಗೆಯಲ್ಲಿ ಬೋರ್ ವೆಲ್ ಗೆ ನೀರು ಇರುತ್ತದೆ. ಇಲ್ಲವಾದರೆ ಪಂಪ್ ಸೆಟ್ ಆಧಾರಿತ ತೋಟಗಾರಿಕೆ ಮಾಡುವ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಧಿಕಾರಿಗಳು ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇತರ ಅರಿವು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರು, ರೈತ ಮುಖಂಡರು ಒತ್ತಾಯ ಮಾಡಿದಾಗೆಲ್ಲಾ ಒಂದೆರಡು ದಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ ನೀರು ಬಿಡುತ್ತಾರೆ. ಸುಮಾರು 4 ತಿಂಗಳಿನಿಂದಲೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸೆಲ್ವ ಕುಮಾರ ಕೆರೆಗೆ ನೀರು ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಕನಕಗಿರಿ ಕೆರೆಯೇ ತುಂಬುತ್ತಿಲ್ಲ. ಕೆರೆ ತುಂಬುವ ಯೋಜನೆಯ ಮೂಲಕ ಬರುವ ನೀರನ್ನು ಅಧಿಕಾರಿಗಳು ಬೇರೆ ಕಡೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಕೂಡಲೇ ಈ ಅಕ್ರಮ ನಿಲ್ಲಿಸಿ, ಕನಕಗಿರಿ ತಾಲೂಕಿನ ಎಲ್ಲಾ ಕರೆ ತುಂಬಿಸಬೇಕು. ಇಲ್ಲವಾದರೆ ನಮ್ಮ ಸಂಘಟನೆಯಿಂದ ಕನಕಗಿರಿಯ ವಾಲ್ಮೀಕಿ ವೃತ್ತ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಎಚ್ಚರಿಕೆ ನೀಡಿದ್ದಾರೆ.
ವರದಿ-ಹನುಮಂತಪ್ಪ ನಾಯಕ