ಯಾದಗಿರಿ :ಜಿಲ್ಲೆಯಲ್ಲಿ 2,66,000 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಕಾಲುಬಾಯಿ ರೋಗದ ಪೂರ್ವಭಾವಿ ಸಭೆ ಹಾಗೂ ಪೋಸ್ಟರ್, ಬ್ಯಾನರ್ ಬಿಡುಗಡೆಗೊಳಿಸಿ ಕಾಲು ಬಾಯಿ ರೋಗ ಲಸಿಕೆ ಶೇ.100 ರಷ್ಟು ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೇಳಿದರು.
ಯಾದಗಿರಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ 2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 6ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕೆ 2024ರ ಅಕ್ಟೋಬರ್ 21 ರಿಂದ ನವೆಂಬರ್ 20ರ ವರೆಗೆ ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕೆಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಪಶುವೈದ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಕಾಲು ಬಾಯಿ ರೋಗ ವಿರುದ್ಧ ಜಾನುವಾರುಗಳಿಗೆ ಲಸಿಕೆ ಹಾಕಲು ಬಂದಾಗ ರೈತರು ಸಿಬ್ಬಂದಿಯವರೊಂದಿಗೆ ಸಹಕರಿಸಿ ಸ್ಪಂದಿಸಿ ತಮ್ಮ ಜಾನುವಾರುಗಳಿಗೆ (ಆಕಳು, ಎಮ್ಮೆ, ಎತ್ತು) ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದರು.
ಲಸಿಕೆ ಮಾಡುವ ಸಮಯದಲ್ಲಿ ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಪಶುಸಂಸ್ಥೆಗಳ ಸಿಬ್ಬಂದಿಗಳು ಗ್ರಾಮಕ್ಕೆ ತೆರಳುವುದರಿಂದ ತೊಂದರೆ ಉಂಟಾದಲ್ಲಿ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 1962ಗೆ ಕರೆ ಮಾಡಲು ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಯಾದಗಿರಿ ಹಾಗೂ ಕಾಲುಬಾಯಿ ರೋಗದ ಮಾಹಿತಿಯನ್ನು ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಶ್ರೀ ರಾಜು ದೇಶಮುಖ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ