ಉತ್ತರ ಕನ್ನಡ/ಅಂಕೋಲಾ: ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಮತ್ತು ಕಾರವಾರದ ಕಾಂಗ್ರೆಸ್ ಶಾಸಕರಾದ ಸತೀಶ್ ಕೃಷ್ಣ ಸೈಲ್ ಅವರನ್ನು ಬಂಧಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಸೂಚನೆ ನೀಡಿದೆ. ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ.
ಬೇಲಿಕೇರಿ ಬಂದರಿನಲ್ಲಿ ಜಪ್ತಿ ಮಾಡಲಾಗಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ನೀಡಿದೆ. ಜೊತೆಗೆ ಎಲ್ಲಾ ಅಪರಾಧಿಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸತೀಶ್ ಸೈಲ್ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ನಡೆದಿರುವ ಈ ಬೆಳವಣಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ತಳ್ಳಿದೆ. ಪ್ರಕರಣದಲ್ಲಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಅಕ್ಟೋಬರ್ 25) ಶಿಕ್ಷೆಯನ್ನು ಪ್ರಕಟಿಸಲಿದೆ.
ವರದಿ – ಸಂದೇಶ್ ನಾಯ್ಕ್