ವಿಜಯಪುರ:”ಶುಕ್ರವಾರ ರಾತ್ರಿ ದೆಹಲಿಯ ವಿಕಾಸ್ ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಪ್ರಿಯ ನಾಯಕ ಅರವಿಂದ್ ಕೇಜ್ರಿವಾಲ್ ರವರ ಮೇಲಿನ ಬಿಜೆಪಿ ಯುವ ಮೋರ್ಚಾದ ಗೂಂಡಾಗಳ ಹಲ್ಲೆಯನ್ನು ಯಾವುದೇ ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಗೂಂಡಾ ನಾಯಕರುಗಳು ತಮ್ಮ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಕೈ ಹಾಕಿದ್ದಾರೆ. ಈ ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರದ ಮುಂದೆ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ರೌಡಿ ಪಡೆ ನಾಯಕರುಗಳನ್ನು ಹತೋಟಿಯಲ್ಲಿ ಇಡಬೇಕೆಂದು” ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಇಂದಿಲ್ಲಿ ಅಗ್ರಹಿಸಿದರು.
“ನಾನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ, ಅರವಿಂದ್ ಕೇಜ್ರಿವಾಲ್ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾಕೆ ಇಷ್ಟು ದ್ವೇಷವಿದೆ? ದೆಹಲಿಯಲ್ಲಿ ಆಗಿರುವಂತಹ ಜನಪರ ಕೆಲಸಗಳನ್ನು ನೀವು ಮಾಡಲು ಸಾಧ್ಯವಾಗಲಿಲ್ಲ. ನೀವು 3 ಬಾರಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋತಿದ್ದೀರಿ. ಆದ್ದರಿಂದ ಈಗ ನೀವು ಕೇಜ್ರಿವಾಲ್ ಅವರನ್ನು ತೊಡೆದುಹಾಕಲು ಈ ವಾಮ ಮಾರ್ಗವನ್ನು ಆರಿಸಿದ್ದೀರಿ” ಎಂದು ಅವರು ಬಿಜೆಪಿಗರ ಮೇಲೆ ಹರಿಹಾಯ್ದರು.
ಶ್ರೀ ಅರವಿಂದ್ ಕೇಜ್ರಿವಾಲ್ ಅವರ ದೆಹಲಿಯಲ್ಲಿ ಪಾದಯಾತ್ರೆಯ ಸಂದರ್ಭದಲ್ಲಿ ಅವರ ಮೇಲೆ ನಡೆದ ದಾಳಿಯ ಸುದ್ದಿ ಖಂಡನೀಯ ಮತ್ತು ಆತಂಕಕಾರಿಯಾಗಿದೆ.
ಈ ದಾಳಿಯನ್ನು ಯಾರು ಮಾಡಿದ್ದಾರೆಂದು ಹೇಳದೇ ಹೋದರೂ, ಭಾರತೀಯ ರಾಜಕೀಯ ಇತಿಹಾಸದಲ್ಲಿ ಯಾರ ರಾಜಕೀಯ ತತ್ವಗಳು ಹಿಂಸೆ ಮತ್ತು ದ್ವೇಷ ಎಂದು ಎಲ್ಲರಿಗೂ ತಿಳಿದ ವಿಷಯ.
ಹಿಂಸಾತ್ಮಕವಾಗಿರುವುದು ಸೋಲಿನ ಸಂಕೇತವಾಗಿದೆ.
ದಾಳಿಕೋರನ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿರುವ ರೀತಿ ನೋಡಿದರೆ ಈ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
“ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸಿದ್ದರೆ ಈ ಘಟನೆ ಹೇಗೆ ನಡೆಯುತ್ತಿತ್ತು? ಹೆಚ್ಚೇನೂ ಆಗಿಲ್ಲ ಎಂದು ಪೊಲೀಸರು ಅಂದುಕೊಂಡಿದ್ದರೆ ಗುಂಡು ಹಾರಿಸಬೇಕಿತ್ತಾ? ದೆಹಲಿಯ ಕಾನೂನು ಸುವ್ಯವಸ್ಥೆ ಕಾಪಾಡುವುದು ದೆಹಲಿ LG ಅವರಲ್ಲಿ ಇರುವುದರಿಂದ ದೆಹಲಿ ಗ್ಯಾಂಗ್ ವಾರ್‌ನ ತಾಣವಾಗಿ ಮಾರ್ಪಟ್ಟಿದೆ” ಎಂದು ಭೋಗೇಶ್ ಸೋಲಾಪುರ್ ವಾಗ್ದಾಳಿ ನಡೆಸಿದರು.
“ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಸಂಚಾಲಕ ಹಾಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪೊಲೀಸರ ಜತೆ ಶಾಮೀಲಾಗಿ ಬಿಜೆಪಿ ಗುಂಪೊಂದು ದಾಳಿ ನಡೆಸುತ್ತಿದೆ.
ಇದು ಗಂಭೀರ ಹಾಗೂ ಆತಂಕದ ವಿಚಾರ.
ಕೇಜ್ರಿವಾಲ್ ರವರ ಮೇಲಿನ ದಾಳಿ, ಇದೇನು ಮೊದಲೇನೂ ಅಲ್ಲ ,ಅನೇಕ ಬಾರಿ ಈ ರೀತಿಯ ದಬ್ಬಾಳಿಕೆಗಳು, ದೌರ್ಜನ್ಯಗಳು, ದಾಳಿಗಳು ಆಗುತ್ತಲೇ ಇದೆ. ಬಿಜೆಪಿಗರಿಗೆ ಪ್ರಾಮಾಣಿಕರು ಎಂದಿಗೂ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಬಾರದು, ಜನಪರವಾದಂತಹ ಆಡಳಿತವನ್ನು ನೀಡಬಾರದು ಎಂಬುದೇ ಇವರ ಉದ್ದೇಶ ಎಂಬುದು ಶುಕ್ರವಾರ ರಾತ್ರಿ ನಡೆದ ದಾಳಿಯಿಂದ ಸಾಬೀತಾಗಿದೆ.
ಖೊಟ್ಟಿ ಪ್ರಕರಣಗಳನ್ನು ದಾಖಲಿಸಿ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಜೈಲಿನಲ್ಲಿಟ್ಟರು ಸಹ ರಾಷ್ಟ್ರದ ಜನತೆ ನಮ್ಮೊಂದಿಗೆ ಇರುವುದನ್ನು ಸಹಿಸಲಾಗದೆ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಬಿಜೆಪಿ ಗೂಂಡಾಗಳು ಮುಂದಾಗಿರುವುದು ಅಸಹ್ಯ ವೆನಿಸುತ್ತಿದೆ” ಎಂದು ಭೋಗೇಶ್ ಸೋಲಾಪುರ್ ಕಿಡಿಕಾರಿದರು.