ಶಿವಮೊಗ್ಗ: ಕರ್ನಾಟಕ ಸರ್ಕಾರವು ಐವತ್ತರ ಸಂಭ್ರಮದ ಪ್ರಯುಕ್ತ ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ರಾಜ್ಯೋತ್ಸವದ ಸಂದರ್ಭದಲ್ಲಿಯೇ ಘೋಷಿಸಿದ್ದು, ಶ್ರೀಮತಿ ನೊಮಿಟೋ ಕಾಮದಾರ್ (ಶಿವಮೊಗ್ಗ ಜಿಲ್ಲೆ- ಸಾಗರ) ರವರಿಗೂ ಬಂದಿದೆ.
ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ರಾಜ್ಯದ 50 ಜನ ಪುರುಷರಿಗೆ ಹಾಗೂ 50 ಜನ ಮಹಿಳಾ ಸಾಧಕಿಯರಿಗೆ ಈ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.
ಈ ಪ್ರಶಸ್ತಿಯನ್ನು ಪಡೆದಿರುವ ಶ್ರೀಮತಿ ನೊಮಿಟೋ ಕಾಮದಾರ್ ಜಗತ್ಪ್ರಸಿದ್ಧ ವ್ಯಕ್ತಿತ್ವ ಹೊಂದಿದವರು ಬಿಕಾಂ ಪದವೀಧರೆ, ಜೊತೆಗೆ ಭಾರತೀಯ
ಸಾಹಸ ಸಮನ್ವಯ ಕೇಂದ್ರದ ಕಾರ್ಯಕ್ರಮ ನಿರ್ದೇಶಕರು.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಮೊದಲಿಂದಲೂ ದುಡಿಯುತ್ತಾ ಬಂದಿರುವ ನೊಮಿಟೋರವರು, ನೆಲ ಜಲಕ್ಕೆ ಸಂಬಂಧಿಸಿದ ಸಾಹಸಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ ಗಮನ ಸೆಳೆದವರು ಮಹಿಳೆಯರಿಗಾಗಿ ಇಂಥ ಶಿಬಿರಗಳನ್ನು ಆಯೋಜಿಸುತ್ತಾ ಮುಂದಾಳತ್ವ ವಹಿಸುತ್ತಾ ಬಂದವರು. ಮಹಿಳಾ ಲೋಕದ ಸ್ವಾಭಿಮಾನದ ಸಂಕೇತವೂ ಆಗಿರುವ ನೊಮಿಟೋ ಹೆಣ್ಣುಮಕ್ಕಳಲ್ಲಿ ಅಂಥ ಧೈರ್ಯ, ಸಾಹಸಗಳನ್ನು ತುಂಬುತ್ತಲೇ ಬಂದವರು.
ಪರಿಸರ ಪ್ರವಾಸೋದ್ಯಮದಲ್ಲಿ ವೃತ್ತಿಪರ ತರಬೇತಿಗಳನ್ನು ನೀಡುತ್ತಾ ಪಶ್ಚಿಮಘಟ್ಟದ ಯುವಕ, ಯುವತಿಯರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವ ಬಹು ಜವಾಬ್ದಾರಿಯುತ ಕೆಲಸ ಮಾಡುತ್ತಲೇ ಬಂದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಸೆಂಟ್ರಲ್ ಟ್ರೈಬಲ್ ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದು ಈ ಕೆಲಸಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಮಾನಸಿಕ, ದೈಹಿಕ, ಭಾವನಾತ್ಮಕವಾಗಿ ಈ ಮೂಲಕ ಶೇ. 85 ರಷ್ಟು ಭಾಗವಹಿಸುವಂಥ ಮಹಿಳೆಯರ ಜಗತ್ತನ್ನು ಬಲ ಪಡಿಸುತ್ತಿದ್ದಾರೆ.
ವಿಶೇಷ ಚೇತನರು, ಮಾನಸಿಕವಾಗಿ ಬಳಲುತ್ತಿರುವವರಿಗೂ ಥೆರಪಿ ಕಾರ್ಯಕ್ರಮಗಳ ಮೂಲಕ ಪರಿಹಾರ ನೀಡುತ್ತಾ ಬಂದಿದ್ದಾರೆ ನೊಮಿಟೋ ಕಾಮದಾರ್. ಬೀದಿ ಮಕ್ಕಳು, ಸ್ಲಂ ಮಕ್ಕಳು, ಪ್ಲಾಟ್ ಫಾರಂ ಮಕ್ಕಳಿಗೂ ಜೀವನ ಕೌಶಲ್ಯ ತರಬೇತಿಗಳನ್ನು ನೀಡುವಲ್ಲಿ ಇವರು ಸಿದ್ಧಹಸ್ತರು. ಈ ತರಬೇತಿ ಪಡೆದ ಬಹುತೇಕ ಮಕ್ಕಳೀಗ ಸ್ವಾವಲಂಬಿಗಳಾಗಿದ್ದಾರೆ ಎಂಬುದು ವಿಶೇಷ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾವಿರಾರು ಶಿಕ್ಷಕರಿಗೆ ಕಲಿಕೆಯ ತರಬೇತಿ ನೀಡಿದ್ದು, ನೀಡುತ್ತಿರುವುದು ಶ್ರೀಮತಿ ನೊಮಿಟೋರವರ ಹೆಮ್ಮೆಯ ಹೆಜ್ಜೆ ಗುರುತುಗಳಲ್ಲೊಂದು.
ಮಕ್ಕಳಲ್ಲಿ, ಮಹಿಳೆಯರಲ್ಲಿ ಮಾತ್ರವಲ್ಲ ಯುವಕ, ಯುವತಿಯರಲ್ಲೂ ನಾಯಕತ್ವದ ಹಾಗೂ ಬದುಕಿನ ಗುಣಗಳನ್ನು ಪರಿಸರ, ಸಾಹಸಿ ತರಬೇತಿಗಳ ಮೂಲಕ ತುಂಬುತ್ತಿರುವ ವಿಶೇಷ ಮಹಿಳೆ ಶ್ರೀಮತಿ ನೊಮಿಟೋ ಕಾಮದಾರ್.
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಶ್ರೀಮತಿ ನೊಮಿಟೋ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಒಂದು ರೀತಿಯಲ್ಲಿ ಟೀಚರ್! ಐಎಎಸ್, ಐಪಿಎಸ್, ಪೊಲೀಸ್, ಆಡಳಿತ ಮಾಡುವವರಿಗೆ ಹೊರಾಂಗಣದಲ್ಲೇ ತರಬೇತಿಗಳನ್ನು ನೀಡಿ ಸೈ ಅನಿಸಿಕೊಂಡಿದ್ದಾರೆ. ರಾಜ್ಯದ ಸುಮಾರು 70 ಕ್ಕೂ ಹೆಚ್ಚಿನ ಕಾರ್ಪೊರೇಟ್ ಕಂಪನಿಗಳಿಗೆ ಔಟ್ ಬೌಂಡ್ ಮ್ಯಾನೇಜ್ ಮೆಂಟ್ ತರಬೇತಿ ನೀಡಿದ ವಿಶೇಷ ಮಹಿಳೆ ಎಂದೇ ಪರಿಗಣಿಸಲ್ಪಡುತ್ತಾರೆ.
ಜಾನಪದ ಕಲೆಗಳನ್ನು ಮೂಲೆ ಮೂಲೆಗೂ ತಲುಪಿಸುವ ಕೆಲಸದಲ್ಲಿಯೂ ಶ್ರೀಮತಿ ನೊಮಿಟೋ ಕಾಮದಾರ್ ಸಿದ್ಧಹಸ್ತರು. ಜೋಗೇರ ಆಟ, ಡೊಳ್ಳು, ಕೋಲಾಟ, ಅಂಡಿಕೆ-ಪಂಟಿಕೆ, ಕಂಸಾಳೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಜನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯರಲ್ಲಿ ಸಬಲೀಕರಣ ಮೂಡಿಸುವಲ್ಲಿ ಇವರ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಸಂತ್ರಸ್ತ, ನೊಂದ, ಒತ್ತಡಕ್ಕೊಳಗಾದ ಹೆಣ್ಣುಮಕ್ಕಳ ಪರವಾಗಿ ಮಿಡಿಯುವ ವಿಶೇಷ ಹೃದಯ. ಹತ್ತು ಹಲವು ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಾ ನೊಂದವರ ಪರ ಮಿಡಿಯುತ್ತಲೇ ಇರುವ ಶ್ರೀಮತಿ ನೊಮಿಟೋ ಕಾಮದಾರ್ ರವರಿಗೆ
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಮಂತ್ರಾಲಯ ಭಾರತೀಯ ಮಹಿಳೆಯರಿಗೆ ಕೊಡುವ ಅತ್ಯುನ್ನತ ನಾರಿಶಕ್ತಿ ಪುರಸ್ಕಾರವನ್ನು 2018 ರಲ್ಲಿಯೇ ನೀಡಿ ಗೌರವಿಸಿದೆ.
ಇದೀಗ ಈ ನಿಜವಾದ ನಾರಿಶಕ್ತಿ ಶ್ರೀಮತಿ ನೊಮಿಟೋ ಕಾಮದಾರ್ ರವರಿಗೆ ಕರ್ನಾಟಕ ಸರ್ಕಾರದ ವಿಶೇಷ ಪ್ರಶಸ್ತಿ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅಭಿನಂದನಾರ್ಹ ಶ್ರೀಮತಿ ನೊಮಿಟೋ ಕಾಮದಾರ್ ಸಾಗರದ ಹೊನ್ನೆಮರಡುವಿನ ಸಾಹಸಿ ಕೇಂದ್ರದ ಸಾಹಸಿ
ಡಾ. ಎಸ್ ಎಲ್ ಎನ್ ಸ್ವಾಮಿಯವರ ಅರ್ಧಾಂಗಿನಿ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.