ದಾವಣಗೆರೆ/ಹೊನ್ನಾಳಿ:
ದೀಪಾವಳಿ ಕೊಬ್ಬರಿ ಹೋರಿ ಹಬ್ಬದ ಸಂಭ್ರಮ ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ :ಗೂಳಿಗಳ ಮಿಂಚಿನ ಓಟ
ಬೆಳಕಿನ ಹಬ್ಬ ದೀಪಾವಳಿಗೆ ಜನಪದ ಸಂಸ್ಕೃತಿಯ ಪ್ರತೀಕವಾದ ಹೋರಿ ಬೆದರಿಸುವ ಸ್ಪರ್ಧೆ ಭಾನುವಾರ ನೂರಾರು ಪ್ರೇಕ್ಷಕರ ಹರ್ಷೋದ್ಘಾರದ ಮಧ್ಯೆ ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಸಂಭ್ರಮದಿಂದ ನಡೆಯಿತು.
ನ್ಯಾಮತಿ ತಾಲೂಕಿನ ಸುರಹೊನ್ನೆ, ಕೆಂಚಿಕೊಪ್ಪ ಮಲ್ಲಿಗೆನಹಳ್ಳಿ, ಜೀನಹಳ್ಳಿ ಮತ್ತು ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ, ದೊಡ್ಡರಹಳ್ಳಿ, ಎರೇಹಳ್ಳಿಹತ್ತೂರು ಗ್ರಾಮಗಳಲ್ಲಿ ಶನಿವಾರ ಮತ್ತು ಭಾನುವಾರ ಕೊಬ್ಬರಿ ಹೋರಿ ಬೆದರಿಸುವ ಹಬ್ಬ ವೈಭವದಿಂದ ಜರುಗಿತು.
ತನ್ನ ನೆಚ್ಚಿನ ಹೋರಿಯನ್ನು ಈ ಅಖಾಡದಲ್ಲಿ ಓಡಿಸಿದಾಗ ಹೋರಿ ಯಾರ ಕೈಯಿಗೂ ಸಿಗದಂತೆ ಛಂಗನೇ ಜಿಗಿದು ಭದ್ರನೇ… ಮಿಂಚಿನ ಓಟ ಕಿತ್ತಾಗ ರೈತರ ಸಂಭ್ರಮ ಇಮ್ಮಡಿಸಿತು. ಕೃಷಿ ಪ್ರಧಾನ ‘ಹಟ್ಟಿ ಹಬ್ಬ’ದಲ್ಲಿ ರೈತರು ಮಾತ್ರವಲ್ಲ, ಕೊಬ್ಬರಿ ಹರಿಯಲೆಂದೇ ನಾನಾ ಕಡೆಯಿಂದ ಬಂದ ಯುವಕರು ಪೈಪೋಟಿಗಿಳಿದು ಹೋರಿ ಹಿಡಿಯುವ ಸಾಹಸ ಮಾಡಿದರು.
ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಹೋರಿ ಹಿಡಿಯಲು ಮುಗಿಬಿದ್ದಿರುವ ಯುವಕರು:
ಹೋರಿ ಮಾಲೀಕರು ದೀಪಾವಳಿ ಹಬ್ಬದ ಪ್ರಯುಕ್ತ ಕೊಬ್ಬರಿ ಹೋರಿಗಳನ್ನು ಬಲೂನ್, ಬಣ್ಣದ ಟೇಪು, ಕೊಬ್ಬರಿ ಮಾಲೆಯಿಂದ ಸಿಂಗರಿಸಿದ್ದರು. ತಮ್ಮ ಹೋರಿಗಳ ಹೆಸರನ್ನು ಹೊಂದಿದ ಟೀ ಶರ್ಟ್ ಹಾಕಿಕೊಂಡು ಯುವಕರು ಅಖಾಡದಲ್ಲಿ ಧ್ವಜ ಹಾರಿಸುತ್ತಾ ಮುಂದೆ ಸಾಗುತ್ತಿದ್ದರೆ, ಹೋರಿ ಬಿಡುವ ಸಂದರ್ಭದಲ್ಲಿ ತಮ್ಮ ಹೋರಿಗಳನ್ನು ಹಿಡಿಯುವ ಸಾಹಸಿಗರಿಗೆ ಬಾರೋ ಸೂರ ಮುಟ್ಟೂ ನನ್ನ ಹೋರಿನ ಎಂಬ ಘೋಷಣೆ ಕೂಗಿ, ಸವಾಲು ಹಾಕುತ್ತಿರುವುದು ಕಂಡುಬಂತು.
ಹೊನ್ನಾಳಿ, ಹಾವೇರಿ ಭಾಗದಲ್ಲಿ ದೀಪಾವಳಿಯ ಪಾಡ್ಯದಿಂದ ಮತ್ತು ಮರು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ ಹೋರಿ ಬೆದರಿಸುವ ಸ್ಪರ್ಧೆ ಮಾಡುತ್ತಾರೆ.
ಕೆಲವರು ತಮ್ಮ ನೆಚ್ಚಿನ ನಟನ ಹೆಸರು ಮತ್ತು ದೇವರ ಹೆಸರುಗಳನ್ನು ಇಡುತ್ತಾರೆ
ಹೋರಿ ಹಿಡಿಯುವ ಸಾಹಸಿಗರು ವೇಗವಾಗಿ ಓಡುತ್ತಿದ್ದ ಕೆಲ ಹೋರಿಯನ್ನು ಹಿಡಿದು ಅಖಾಡದಲ್ಲಿ ನಿಲ್ಲಿಸಿ, ಹೋರಿ ಕೊರಳಿನಲ್ಲಿದ್ದ ಕೊಬ್ಬರಿ ಸರವನ್ನು ಕಿತ್ತು ಗಮನ ಸೆಳೆದರು. ಹಲವಾರು ಚಿತ್ರ ನಟರ, ದೇವರ ಹೆಸರನ್ನು ಎತ್ತುಗಳಿಗೆ ಇಡಲಾಗಿತ್ತು, ಕತ್ತಿಗೆ ಕರಿ ಚಿರತೆ, ಸುರಹೊನ್ನೆ ವೀರಕೇಸರಿ, ಮಾದೇನಹಳ್ಳಿ ಧೀರ ಹೀಗೆ ಹಲವಾರು ಹೆಸರಿನ ಹೋರಿಗಳು ಭಾಗವಹಿಸಿದ್ದವು.
ಅಖಾಡದಲ್ಲಿ ಹೋರಿ ಬಿಟ್ಟಾಗ, ಮೈಕ್ನಲ್ಲಿ ಎಚ್ಚರಿಕೆಯ ವೀಕ್ಷಕ ವಿವರಣೆ ಘೋಷಣೆ ಕೂಗುವ ವ್ಯಕ್ತಿ. ನಿಂತ ಯುವಕರಿಗೆ ‘ಹೋರಿ ಬಂತು.. ಎಚ್ಚರೆಚ್ಚರ ಇಂದು ಬಿರುಗಾಳಿ, ಬೆಂಕಿ ಓಟ ಎಂಬ ಮಾತು ಆಡಿ ರೈತರು ಮತ್ತು ಹೋಗಿ ಹಿಡಿಯುವವರನ್ನು ಹುರಿದುಂಬಿಸಿದರು.