ವ್ಯಾಪಾರ ಸ್ಥಗಿತಗೊಳಿಸಿದ್ದ ಅಂಗಡಿ ಮುಂಗಟ್ಟುಗಳು..!!
ರಾಮದುರ್ಗ : ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ರಾಮದುರ್ಗ- ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ಕೂಡಿಸಬೇಕೆಂದು ಒತ್ತಾಯಿಸಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಮಂಗಳವಾರ (ನ.12) ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ತೇರ ಬಜಾರ್, ಹುತಾತ್ಮ ಸರ್ಕಲ್, ಹರಳಯ್ಯ ಸರ್ಕಲ್ ಮತ್ತು ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತಲುಪಿ ಸಮಾವೇಶಗೊಂಡಿತು.ನಂತರ ತಹಶೀಲ್ದಾರ್ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಮಠಾಧೀಶರು, ಮುಸ್ಲಿಂ ಸಮುದಾಯದ ಮೌಲ್ವಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು, ನ್ಯಾಯವಾದಿಗಳು, ವಿವಿಧ ಕನ್ನಡ ಪರ, ಜನಪರ ಸಂಘಟನೆಗಳು, ವಿದ್ಯಾರ್ಥಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ಕಿರಾಣಿ, ಬಟ್ಟೆ ಸೇರಿದಂತೆ ವಿವಿಧ ಅಂಗಡಿಗಳ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ರೈಲ್ವೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು..
ಶಕ್ತಿಪೀಠವಾದ ಮಿನಿ ವಿಧಾನಸೌಧದ ಮುಂದೆ ನಿರ್ಮಿಸಿದ ಸಮಾವೇಶದ ವೇದಿಕೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕುತ್ಬುದ್ದಿನ್ ಕಾಜಿ ಮಾತನಾಡಿ “ ರಾಮದುರ್ಗ-ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ಕೂಡಿಸಬೇಕೆಂದು ಬಹಳ ದಿನಗಳಿಂದ ಹೋರಾಟಗಳು ನಡೆಯುತ್ತಿವೆ.ನಾವು ಹೋರಾಟ ಮಾಡಿದಾಗಲೇ ನಮಗೆ ಸೌಲಭ್ಯಗಳು ಸಿಗಲು ಸಾಧ್ಯ.ಆ ನಿಟ್ಟಿನಲ್ಲಿ ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ನಿರ್ಮಾಣಕ್ಕೆ ಎಲ್ಲರೂ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಬೆಂಬಲಿಸಿ. ಅಲ್ಲದೆ ಸ್ಥಳೀಯ ಶಾಸಕರು ಮತ್ತು ಸಂಸದರು ಇಚ್ಚಾಶಕ್ತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಭಾಗದ ಜನರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು” ಆಗ್ರಹಿಸಿದರು.
ನಂತರ ವಿವಿಧ ಮಠಾಧೀಶರು,ಮೌಲ್ವಿಗಳು ಹಾಗೂ ಮುಖಂಡರುಗಳು ಮಾತನಾಡಿ “ ರಾಮದುರ್ಗ-ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ಕೂಡಿಸಬೇಕೆಂದು ಬಹಳ ದಿನಗಳ ಬೇಡಿಕೆಯಾಗಿದೆ.ಚುನಾಯಿತ ಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಆದಷ್ಟು ಬೇಗ ನಮ್ಮ ಈ ಭಾಗದ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು. ”
ಈ ಸಂದರ್ಭದಲ್ಲಿ ಮಹ್ಮದ ಶಫಿ ಬೆಣ್ಣಿ, ಜಹೂರ ಹಾಜಿ, ಎಂ. ಕೆ ಯಾದವಾಡ, ಗೈಬು ಜೈನೆಖಾನ, ಸುಭಾಷ್ ಘೋಡಕೆ,ವಿಜಯ ನಾಯ್ಕ, ದಾದಾಪೀರ ಕೆರೂರ್ ಇನ್ನಿತರರು ಉಪಸ್ಥಿತರಿದ್ದರು.