“ಯಾರು ಹೋಗುತ್ತೀರಿ ಸ್ವರ್ಗಕ್ಕೆ”
ಕೇಳಿದರು ಗುರುಗಳು ಶಿಷ್ಯ
ಗಣಕ್ಕೆ,
ಶಿಷ್ಯರೆಲ್ಲರೂ ನೋಡಿಕೊಂಡರು,
ತಮ್ಮ ತಮ್ಮ ಮುಖಾರವಿಂದ
ಎಲ್ಲರಿಗೂ ತಮ್ಮೊಳಗೇ ಅನುಮಾನ,
” ನೀ ಏನಂತಿಯೋ ಕನಕ”
ಎಂದರು ಗುರುವರ್ಯರು,
” ನಾ ಹೋದರೆ ಹೋದೇನು”
ಅಂದರು ಕನಕದಾಸರು.
ಅಂದರಾಗ ಉಳಿದ ಶಿಷ್ಯರು,
ಕನಕನಿಗೆ ಕೊಬ್ಬು,ಅತಿಯಾಯ್ತು,
ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನು
ನೋಡಿ ಅಪಹಾಸ್ಯ ಮಾಡಿ,
ಮಾತನಾಡಿದರು ದಾಸರನೇಕರು.
ಗುರುಗಳಿಗೆ ಮಾತ್ರ
ಗೊತ್ತಾಯಿತು,
“ಭಲೇ ಕನಕ” ಎಂದವರು
ಬೆನ್ನು ತಟ್ಟಿದರು,ಅವರೇ
ಮಾತಿನ ಮರ್ಮವನು
ಬಹಿರಂಗ ಪಡಿಸಿದರು,
ಶಿಷ್ಯ ಗಣವೆಲ್ಲಾ
ತಗ್ಗಿಸಿತು ತಲೆಯ,
ತಿಳಿದರು ಕನಕನ ಮಾತಿನ
ಅಂತರಾರ್ಥ.
ಬಿಡಬೇಕು “ನಾನು” ಎಂಬ ಅಹಂಕಾರ,
ಆದೀತು ಆಗ ಭಗವಂತನ
ಸಾಕ್ಷಾತ್ಕಾರ.
ಸಾರಿದರು ಕನಕರು ಲೋಕಕ್ಕೆ
ಈ ಮಾತಿನ ಸಾರ,
ಇವರಾದರು ವ್ಯಾಸರ ಶಿಷ್ಯರು,
ಇವರೇ ನಮ್ಮ ಕನಕದಾಸರು..
-ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸ.ಪ್ರ.ದ. ಮಹಿಳಾ ಕಾಲೇಜು
ಕೊಪ್ಪಳ.೫೮೩೨೩೧.