ಬಾಗಲಕೋಟೆ/ ಹುನಗುಂದ :ಭಾರತೀಯ ಸಂಸ್ಕೃತಿ ಪರಂಪರೆ ಅಮೋಘವಾದದ್ದು, ಅದು ಜೀವನ ವಿಧಾನವನ್ನು ತಿಳಿಸುತ್ತದೆ. ಇಂಥ ಪರಂಪರೆಯ ಕೆಲವು ಅಮೂಲ್ಯ ಅಂಶಗಳು ಕಣ್ಮರೆಯಾಗದಂತೆ ಎಚ್ಚರ ವಹಿಸಬೇಕು. ಅವುಗಳನ್ನು ಸಂಶೋಧಿಸಿ ಸಮಾಜಕ್ಕೆ ಕೊಡಬೇಕಾದ ಬಹುದೊಡ್ಡ ಜವಾಬ್ದಾರಿ ಸಾಹಿತಿಗಳ ಪರಿಶೋಧಕರ ಮೇಲಿದೆ ಎಂದು ನಿವೃತ್ತ ಶಿಕ್ಷಕ ಸಾಹಿತಿ ಎಸ್.ಕೆ.ಕೊನೆಸಾಗರ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಭಾನುವಾರ ನಡೆದ ಪ್ರಾಧ್ಯಾಪಕ ಡಾ. ಎಲ್.ಜಿ.ಗಗ್ಗರಿ ಅವರ ಗುಂಡಬ್ರಹ್ಮಯ್ಯರು ಸಂಸ್ಕೃತಿಯ ಅಧ್ಯಯನ ಸಂಶೋಧನಾ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು ಮುಂದುವರೆದು ಇದೊಂದು ಸಮಾಜಮುಖಿ ಕೆಲಸ ಎಂದು ವಿವರಿಸುವುದಲ್ಲದೆ.ಕನ್ನಡ ಸಂಶೋಧನಾ ಕ್ಷೇತ್ರ ಬಹುಮುಖಿಗೊಳ್ಳಬೇಕಾಗಿದೆ. ವಿಷಯ ಮತ್ತು ಗ್ರಹಿಕೆಯಲ್ಲಿ ವಿಸ್ತಾರಗೊಳ್ಳಬೇಕು ಅಂತರ್ ಶಿಸ್ತಿನ ಅಧ್ಯಯನದ ತುರ್ತು ಅಗತ್ಯವಿದೆ ಎನಿಸುತ್ತದೆ. ಬೇರೆ ಭಾಷೆಗಳಲ್ಲಿನ ಸಂಶೋಧನೆಗಳಲ್ಲಿ ಬೆಳಕು ಕಾಣಬೇಕು ಅಗತ್ಯವಾದ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪರಂಪರೆಯ ನೆರಳಿನಲ್ಲಿಯೇ ಸಂಶೋಧನೆ ಸತ್ಯದ ಬೆಳಕಾಗಲಿ ಅಲಕ್ಷಿತ ಕ್ಷೇತ್ರಗಳ ವ್ಯಕ್ತಿತ್ವ ಕುರಿತಾದ ವಿಚಾರಗಳು ವೈಚಾರಿಕೆಯ ಬೆಳಕಿನಲ್ಲಿ ಅಧ್ಯಯನ ನಡೆಯಬೇಕು ಎಂದು ವಿವರಿಸಿದರು.
ಭಾರತೀಯ ಸಂಸ್ಕೃತಿ ,ಪರಂಪರೆ ಅಮೋಘವಾಗಿದ್ದು ಅದು ಜೀವನ ವಿಧಾನವನ್ನು ತಿಳಿಸುತ್ತದೆ ಇಂಥ ಪರಂಪರೆಯ ಕೆಲವು ಅಮೂಲ್ಯ ಅಂಶಗಳು ಕಣ್ಮರೆಯಾಗಿವೆ. ಅವುಗಳನ್ನು ಸಂಶೋಧಿಸಿ ಸಮಾಜಕ್ಕೆ ಕೊಡಬೇಕಾದ ಬಹುದೊಡ್ಡದು ಎಂದು ಹೇಳಿದರು. ಇಂಥ ಕೆಲಸವನ್ನು ಡಾ. ಎಲ್.ಜಿ. ಗಗ್ಗರಿಯವರು ಮಾಡಿದ್ದಾರೆ. ಇದೊಂದು ಸಮಾಜದ ಮುಖ್ಯ ಕೆಲಸ ಎಂದು ವಿವರಿಸಿದರು.
ಅಧ್ಯಕ್ಷತೆಯನ್ನು ಸಂಗಣ್ಣ ಮುಡಪಲದಿನ್ನಿ ವಹಿಸಿ ಮಾತನಾಡಿ, ಸಂಶೋಧನೆಗಳು ನಮ್ಮ ಸಂಸ್ಕೃತಿಯ ಭಾಗವಾಗಿವೆ. ಗುಂಡಬ್ರಹ್ಮಯ್ಯನವರು ಸಂಸ್ಕೃತಿಕ ಅಧ್ಯಯನ ಇದೊಂದು ಸಂಶೋಧನಾ ಕೃತಿಯಾಗಿದೆ ಈ ಗ್ರಂಥದಲ್ಲಿ ಹೊಸ ವಿಷಯವನ್ನು ದಾಖಲಿಸಿ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಇದೊಂದು ಅಪರೂಪದ ಕೋಡುಗೆ ಎಂದು ಅಭಿಪ್ರಾಯ ಪಟ್ಟರು.
ಮೈಸೂರಿನ ಜೆ ಎಸ್ ಎಸ್ ಕಾಲೇಜಿನ ಪ್ರಾಧ್ಯಾಪಕ ಎಸ್ ಸುದೀಪ್ ಕೃತಿಯ ಕುರಿತು ಅವಲೋಕಿಸಿ ಮಾತನಾಡಿ, ವಚನೋತ್ತರ ಕಾಲದ ಅಲಕ್ಷಿತ ಶರಣರಾದ ಕುರಿತು ಪ್ರಾಧಾಪಕ ಎಲ್ ಜಿ ಗಗ್ಗರಿ ಅವರು ಬರೆದಿರುವ ಗುಂಡಯ್ಯ ಬ್ರಹ್ಮಯ್ಯನವರು ಸಾಂಸ್ಕೃತಿಕ ಅಧ್ಯಯನ ಕೃತಿಯು ಅತ್ಯುತ್ತಮವಾಗಿದೆ ಎಂದ ಅವರು ವಸಾಹತುಶಾಹಿಯ ಚಿಂತನೆಯು ಫಲವಾಗಿ ಸಾಂಸ್ಕೃತಿಕ ಅಧ್ಯಯನಗಳು ಆರಂಭವಾದವು. ಇವುಗಳ ಉದ್ದೇಶ ಸ್ಥಳೀಯ ಜ್ಞಾನವನ್ನು ಕಟ್ಟಿಕೊಡುವುದು ಮತ್ತು ಸಾಂಸ್ಕೃತಿಕ ಜಗತ್ತನ್ನು ಅರಿಯುವುದಾಗಿತ್ತು. ಅಲಕ್ಷಿತ ಶರಣರಾದ ಗುಂಡಬ್ರಹ್ಮಯ್ಯರ ಅಧ್ಯಯನದಿಂದ ಹೊಸ ಸಾಂಸ್ಕೃತಿಕ ಅಂಶಗಳು ಗುರುತಿಸಲ್ಪಟ್ಟಿವೆ. ಕರ್ನಾಟಕ ಮತ್ತು ಆಂಧ್ರ ಭಾಗದಲ್ಲಿನ ಶರಣ ಸಂಸ್ಕೃತಿಯ ಪರಿಸರದ ಅನಾವರಣಗೊಂಡಿದೆ ಎಂದರು.
ಸಿಡಿಸಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಂಶೋಧನೆ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ.ಯುವ ಪೀಳಿಗೆಯ ಸಂಶೋಧಕರು ಸ್ಥಳೀಯ ಜ್ಞಾನವನ್ನು ಸಾಂಸ್ಕೃತಿಕ ಅಧ್ಯಯನಗಳನ್ನು ಕೈಗೊಳ್ಳಬೇಕು ಸಂಶೋಧನೆಗಳು ಪೂರ್ವಾಗ್ರಹ ಪೀಡಿತ ಚಿಂತನೆಗಳಿಂದ ಕೂಡಿರಬಾರದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ಎನ್ ಜೆ. ರಾಮವಾಡಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಸಿಖಂದರ್ ಧನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಕಲ್ ಪದವಿ ಕಾಲೇಜಿನ ಪ್ರಾಚಾರ್ಯ ಆರಿಫ್ ರಾಜಾ, ಉಪನ್ಯಾಸಕರಾದ ಡಾ.ಮುರ್ತುಜಾ ಒಂಟಿ, ಎಂ ಡಿ ಚಿತ್ತರಗಿ, ಈರಣ್ಣ ಹುರಳಿ, ಜಗದೀಶ ಹಾದಿಮನಿ, ಡಾ.ವಸಂತಕುಮಾರ ಕಡ್ಲಿಮಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಭಿಷೇಕ್ ಮೂಡಪಲದಿನ್ನಿ ಪ್ರಾರ್ಥಿಸಿದರು. ಅಮರೇಶ ಗೌಡರ ಸ್ವಾಗತಿಸಿದರು. ಗೀತಾ ತಾರಿವಾಳ ನಿರೂಪಿಸಿದರು. ಡಾ. ಸಿ.ಎನ್.ರಂಗನಾಥ ವಂದಿಸಿದರು.