ರಾಯಚೂರು: ಉದಯನಗರದಲ್ಲಿ ವಾಸವಾಗಿರುವ ತತ್ವಪದ, ಜಾನಪದ ಹಿರಿಯ ಕಲಾವಿದ ಗೀತಗಾಯನದ ಜೊತೆಗೆ ಹೆಚ್ಚು ತಬಲಾ ಸಾಥ್ ನೀಡುವ ಖ್ಯಾತ ತಬಲಾ ಚತುರನಾದ ಅಲೆಮಾರಿ ಸಮುದಾಯದ ಶಿವರಾಜ ಕವಿತಾಳ ಸುಗಮ ಸಂಗೀತದ ಗೀತಗಾಯನದಲ್ಲಿ ರಾಯಚೂರಿನ ಗೀತಾಂಜಲಿ ವಾದ್ಯವೃಂದ, ರಾಂಗಸಂಗಮ ತಂಡದ ಜೊತೆಗೆ ಗುರುತಿಸಿಕೊಂಡಿರುವ ಅಪ್ಪಟ ತಬಲಾ ಕಲಾವಿದ ಇವರು ಹುಟ್ಟು ಬಾಲ್ಯದಿಂದಲೂ ಕಲಾವಿದರಾಗಿ ಗುರುತಿಸಿಕೊಂಡಿರುವುದಕ್ಕೆ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಮನಗಂಡು ರಾಯಚೂರಿನ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜ.18 ರಂದು ನಡೆಸಲ್ಪಡುವ ರಾಷ್ಟ್ರಮಟ್ಟದ ಕನ್ನಡ ಕಲರವ ಸಮ್ಮೇಳನದಲ್ಲಿ ಬೆಳಕು ಸಂಸ್ಥೆಯು ತನ್ನ 119 ನೆಯ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಮಟ್ಟದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ಹುಟ್ಟು ಕಲಾವಿದರು ಬಾಲ್ಯದಿಂದಲೂ ಅಂದರೆ 10-12 ನೇ ವರ್ಷದಿಂದಲೇ ಕುಟುಂಬದಿಂದ ಬಳುವಳಿಯಾಗಿ ಬಂದ ಹಗಲುವೇಷದ ಸ್ತ್ರೀ ಪಾತ್ರ, ಪುರುಷ ಪಾತ್ರ, ರಾವಣ-ಭೀಮನ ಪಾತ್ರ ತಬಲಾ ಮತ್ತು ಹಾಡುಗಾರಿಕೆ ಮಾಡುತ್ತಾ ಬೆಳೆಯುತ್ತಾ ಬೆಳೆಯುತ್ತಾ, ಸುಮಾರು 45 ವರ್ಷದಿಂದ ಸಂಗೀತ ಸೇವೆ ಸಲ್ಲಿಸುತ್ತಾ, ಬಾಲ್ಯದಲ್ಲಿ ಸಾಕಷ್ಟು ಹಗಲುವೇಷ ಹಾಕಿ, ಈಗ ತಂಡದ ಕೊರತೆಯಿಂದ ಹಗಲುವೇಷ ಬಿಟ್ಟು ಸಂಗೀತ ಗೀತಗಾಯನ, ತಬಲಾಕ್ಕೆ ಮಾತ್ರ ಸೀಮಿತವಾಗಿ ಕಲಾಬದುಕು ನಡೆಸುತ್ತಿದ್ದಾರೆ. ಸಂಗೀತವನ್ನು ನಿರ್ದಿಷ್ಟವಾಗಿ ಇಂತಹವರಿಂದಲೇ ಅಂತ ಕಲಿತಿಲ್ಲ, ಕಲಾವಿದರ ಕುಟುಂಬ ಆದ್ದರಿಂದ ಮನೆಯಲ್ಲಿ ಸ್ವತಃ ಕಲಿತಿದ್ದಾರೆ. ಅದಾಗ್ಯೂ ಪಂಚಾಕ್ಷರಿ ಗವಾಯಿ ಅವರ ಶಿಷ್ಯ ಅಮರಯ್ಯ ಸ್ವಾಮಿ ಹಿರೇಮಠ, ಮೈಸೂರು ಅವರು ತಬಲಾವಾದ್ಯದ ಕುರಿತು ಮಾರ್ಗದರ್ಶನ ನೀಡಿದ್ದಾರೆ ಎಂದು ಸ್ಮರಿಸುತ್ತಾರೆ. ಹಟ್ಟಿಯಲ್ಲಿ ಬಿಲ್ ಕಲೆಕ್ಟರ್ ಇದ್ದರು. ಆಗ ಅವರ ಹತ್ತಿರ ಹೋಗುತ್ತಿದ್ದೆ. ಆಗ ಹೇಳುತ್ತಿದ್ದರು ಎನ್ನುತ್ತಾರೆ.
ಪುಟ್ಟರಾಜ ಗವಾಯಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈಗಲೂ ಪ್ರತಿವರ್ಷ ತಪ್ಪದೇ ಗದಗ ಮಠದ ಜಾತ್ರೆಗೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ತತ್ವಪದ, ಜನಪದ, ವಚನಗಳು, ಪ್ರಾರ್ಥನಾ ಗೀತೆಗಳನ್ನು ಹಾಡುತ್ತಾರೆ. ಗೀತಗಾಯನ ಅಷ್ಟೇ ಅಲ್ಲ ತಬಲಾ ಸಾಥ್ ಹೆಚ್ಚು ಕೊಡುತ್ತಾರೆ. ಜಾನಪದ ಕಲಾವಿದ ಗುರುರಾಜ್ ಹೊಸಕೋಟೆ ಅವರ ನಾಲ್ಕೈದು ಸಂಗೀತ ಕಾರ್ಯಕ್ರಮಗಳಿಗೂ ರಾಯಚೂರು ರಂಗ ಮಂದಿರದಲ್ಲಿ ತಬಲಾ ಸಾಥ್ ನೀಡಿದ್ದಾರೆ. ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಕಲಾವಿದರಿಗೆ ತಬಲಾ ಸಾಥ್, ಪೋತ್ನಾಳ ಜಿಲ್ಲಾ ಕನ್ನಡ ಸಮ್ಮೇಳನದಲ್ಲಿ ಸ್ವತಃ ಗೀತಗಾಯನ ಮತ್ತು ತಬಲಾ ಸಾಥ್ ನೀಡಿದ್ದಾರೆ. ರಾಯಚೂರು ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಶರಣಪ್ಪ ಗೋನಾಳ ಅವರೊಂದಿಗೆ ತಬಲಾ ಸಾಥ್ ನೀಡಲು ಈಗಲೂ ಇಲಕಲ್ ಮಠಕ್ಕೆ ಖಾಯಂ ಇರುತ್ತಾರೆ. ವೀರೇಂದ್ರಕುಮಾರ ಕುರ್ಡಿ, ಆಸ್ಕಿಹಾಳ ಅವರ ಗಾಯನಕ್ಕೆ ಸದಾ ತಬಲಾ ಸಾಥ್ ಇರುತ್ತಾರೆ. ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ಬಂದಾಗ ಪ್ರಾಥನಾ ಗೀತೆ, ನಾಡಗೀತೆ ಕಾರ್ಯಕ್ರಮಗಳಲ್ಲೂ ಮಸ್ಕಿಯಲ್ಲಿ ತಬಲಾ ಸಾಥ್ ನೀಡಿದ್ದಾರೆ. ಬಸವ ಟಿವಿಯಲ್ಲೂ ಸಾಥ್ ಕೊಟ್ಟಿದ್ದಾರೆ ಜೊತೆಗೆ ಹಾಡಿದ್ದಾರೆ.
ಉಡುಪಿ, ಧಾರವಾಡ ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕೈವಾರ ಮಠ, ಅಬ್ಬೆ ತುಮಕೂರು, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯ ಹೀಗೆಯೇ ಮುಂತಾದ ನಗರಗಳಲ್ಲಿ ತಬಲಾ ಸಾಥ್ ಹಾಗೂ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಸುಮಾರು 5000 ಕ್ಕೂ ಹೆಚ್ಚು ನಾಟಕಗಳಲ್ಲಿ ಸಂಗೀತಕ್ಕೆ ತಬಲಾ ಸಾಥ್ ನೀಡಿದ ಹೆಗ್ಗಳಿಕೆ ಇವರದ್ದು. ಸ್ವತಃ ತಮ್ಮ ಹಾರ್ಮೋನಿಯಂ, ತಬಲಾಗಳಿಗೆ ತಾವೇ ರಿಪೇರಿ ಮಾಡಿಕೊಳ್ಳುತ್ತಾರೆಂದು ಶಿವರಾಜ ಕವಿತಾಳ ತಮ್ಮ ಸಾಧನೆಯ ಬಗ್ಗೆ ಈ ರೀತಿಯಾಗಿ ಹಂಚಿಕೊಂಡರು.
