ವಿಜಯಪುರ: ಬಸವನ ಬಾಗೇವಾಡಿ ತಾಲೂಕಾ ಆಸ್ಪತ್ರೆಯಲ್ಲಿ ಇರುವ ಚಿಕ್ಕಮಕ್ಕಳ ವೈಧ್ಯಾಧಿಕಾರಿ ಡಾ. ಸಂಜಯ ಹಾಗೂ ಸ್ಪಾಫ್ ನರ್ಸ್ ಆದ ಸಂಗಮೇಶ ಅವರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಭಾರತೀಯ ದ್ರಾವಿಡ ದಲಿತ ಸೇನೆ ಮೂಲ ನಿವಾಸಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಖಾಜಂಬರ ನದಾಫ್ ಮಾತನಾಡಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಾ ಆಸ್ಪತ್ರೆಯ ಚಿಕ್ಕ ಮಕ್ಕಳ ವೈದ್ಯಾಧಿಕಾರಿಗಳಾದ ಡಾ. ಸಂಜಯ ಹಾಗೂ ಸ್ಟಾಫ್ ನರ್ಸ್ ಸಂಗಮೇಶ ಇವರು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂಧಿಸದೇ ಅಸಭ್ಯವಾಗಿ ವರ್ತಿಸುತ್ತಾರೆ, ನಾನೇ ಎಂಬ ಅಹಂಕಾರ ಮನೋಭಾವನೆ ವರ್ತನೆಯಿಂದ ನಡೆದುಕೊಳ್ಳುತ್ತಾರೆ. ಚಿಕ್ಕ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಆ ಮಗುವಿಗೆ ಸ್ಟೇಥಾ ಸ್ಕೋಫ್ ಬಳಕೆ ಮಾಡದೇ ಮಗುವನ್ನು ಮುಟ್ಟದೇ, ಅಂದಾಜಿನ ಮೇಲೆ ಮಾತ್ರೆ, ಇಂಜೆಕ್ಷನ್ ಬರೆದುಕೊಡುತ್ತಾರೆ, ಸದರಿ ವಿಷಯದ ಕುರಿತು ನಾವು ಪ್ರಶ್ನಿಸಿದಾಗ, ಅದನ್ನು ನನಗೆ ಕೇಳೋಕೆ ನೀವ್ಯಾರು, ? ಅದನ್ನು ಕೇಳೋಕೆ ನನ್ನ ಮೇಲಾಧಿಕಾರಿಗಳಿದ್ದಾರೆ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಈ ರೀತಿ ಅಂದಾಜಿನ ಮೇಲೆ ಮಾತ್ರೆ, ಇಂಜೆಕ್ಷನ್-ಬರೆದು ಆರೋಗ್ಯ ಉತ್ತಮಗೊಳಿಸಲು ನೀವೇನು ದೇವರೇ? ಎಂದು ಕೇಳಿದರೆ ಅದಕ್ಕೆ ಅವರು ನಾನು ದೇವರು, ನಾ ಹೇಳಿದ್ದೆ ನಡೆಯೋದು, ನೀವು ಏನು ಬೇಕಾದರೂ ಮಾಡಿ, ಆದರೆ ನನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿಸಿ ನನಗೂ ಈ ಆಸ್ಪತ್ರೆಯಲ್ಲಿ ನೌಕರಿ ಮಾಡಿ ಸಾಕಾಗಿದೆ ನಾನೇನು ಯಾವುದಕ್ಕೂ ಅಂಜುವುದಿಲ್ಲ ಎಂದು ಈ ಹೇಳುತ್ತಾರೆ. ಇದಲ್ಲದೇ ಇವರ ಕರ್ತವ್ಯ ನಿಷ್ಠೆ ಯಾವ ರೀತಿ ಇದೆ ಎಂದರೆ, 11-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ನಂತರ, 12-00 ಗಂಟೆಗೆ ಚಹಾ ಕುಡಿಯುವ ನೆಪ ಮಾಡಿ ಹೊರಗಡೆ ಹೋದರೆ ಮರಳಿ ಬರುವುದು 1-00 ಗಂಟೆ ನಂತರ 1-20 ಕ್ಕೆ ಊಟಕ್ಕೆ ಎಂದು ಹೋದರೆ ಮರಳಿ ಬರುವದು ಮಧ್ಯಾಹ್ನ 3-30 ಕ್ಕೆ ನಂತರ ಬಂದು 4 ಕ್ಕೆ ಕರ್ತವ್ಯ ಮುಗಿಯಿತು ಎಂದು ಮನೆಗೆ ಹೋಗುವುದು. ಇವರೊಂದಿಗೆ ಸ್ಟಾಫ್ ನರ್ಸ್ ಸಂಗಮೇಶ ಸಹ ತಮ್ಮದೇ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಇವರು ಸಹ ತಮ್ಮ ಕರ್ತವ್ಯದಲ್ಲಿ ಕಲಿಯಲು ಬಂದ ನರ್ಸ್ ವಿದ್ಯಾರ್ಥಿಗಳಿಗೆ ಕರ್ತವ್ಯಕ್ಕೆ ಹಚ್ಚಿ ಹೊರಗಡೆ ತಿರುಗಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ಇವರು ನನಗೂ 15 ವರ್ಷಗಳಿಂದ ನೌಕರಿ ಮಾಡಿ ಸಾಕಾಗಿ ಹೋಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇಂತಹ ಸ್ಟಾಫ್ ನರ್ಸ್ ಇದ್ದರೆ ತಾಲೂಕಾ ಆಸ್ಪತ್ರೆಯ ಹೆಸರು ಕೆಟ್ಟು ಹೋಗುವುದಲ್ಲದೇ ಅನೇಕ ಜನರ ಸಾವಿಗೆ ಕಾರಣವಾಗಲು ಬಹಳ ದಿನಗಳು ಉಳಿದಿಲ್ಲ. ತಮ್ಮ ವೈದ್ಯಾಧಿಕಾರಿಗಳಿಗಿಂತಲೂ ಹೆಚ್ಚಾಗಿ ಬೇಜಾವಾಬ್ದಾರಿ ಉತ್ತರ ನೀಡುವುದು ಇವರದ್ದಾಗಿದೆ. ಈ ರೀತಿ ಸಾರ್ವಜನಿಕರು ಯಾರೂ ಅವರನ್ನು ಪ್ರಶ್ನೆ ಮಾಡುವಂತಿಲ್ಲ. ‘ಈ ರೀತಿ ಇರುವ ಒಬ್ಬಿಬ್ಬರಿಂದ ಇಡೀ ತಾಲೂಕಾ ಆಸ್ಪತ್ರೆನೇ ಕೆಟ್ಟು ಹಾಳಾಗಿ ಹೋಗುತ್ತಿದೆ. ತಕ್ಷಣ ಜಿಲ್ಲಾ ವೈಧ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ದುರಂಕಾರ ತೋರುವ ಡಾ. ಅವರನ್ನು ಅಮಾನತ್ತು ಮಾಡಿ ತಾಲೂಕಾ ಆಸ್ಪತ್ರೆಗೆ ಜನರೊಂದಿಗೆ ಬೆರೆಯುವ ಡಾಕ್ಟರ್ ಅವರನ್ನು ನೇಮಕ ಮಾಡಿ ತಾಲೂಕಿನ ಆರೋಗ್ಯ ಕಾಪಾಡುವಲ್ಲಿ ಮುಂದಾಗಬೇಕು ಎಂದು ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲು ಜಾಲಗೇರಿ ಮಾತನಾಡಿ, ಚಿಕ್ಕ ಮಕ್ಕಳ ವೈದ್ಯಾಧಿಕಾರಿಗಳು ಹಾಗೂ ಸದರಿ ಸ್ಟಾಫ್ ನರ್ಸ್ ಆದ ಸಂಗಮೇಶ ಇವರನ್ನು ಬೇರೆ ಕಡೆ ವರ್ಗಾವಣೆ ಮಾಡದೇ ಇಂತಹ ವ್ಯಕ್ತಿಗಳನ್ನು ಅಮಾನತ್ತು ಮಾಡುವುದೇ ಸೂಕ್ತವೆಂದು ನಮ್ಮ ಅಭಿಪ್ರಾಯವಾಗಿದೆ. ಈ ವಿಷಯವನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ತಾವುಗಳು ಕೂಡಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸದರಿ ನಮ್ಮ ಸೇನಾ ವತಿಯಿಂದ ಉಗ್ರವಾದ ಹೋರಾಟವು ಆಸ್ಪತ್ರೆ ಬಸವನ ಬಾಗೇವಾಡಿ ಎದುರುಗಡೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ರಮೇಶ ಯಲ್ಲಪ್ಪ ಚಲವಾದಿ, (ಕವಲಗಿ) ಜಿಲ್ಲಾಧ್ಯಕ್ಷ ಸೋಮು ಹಟ್ಟಿ, ಅಬೀದ ತಾಂಬೋಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ ಬೋರಗಿ, ಅಖಿಲ ಭಾರತ ಪಿಂಜಾರ ನದಾಫ್ ಮನ್ಸೂರ ಮಹಾಮಂಡಳ ಜಿಲ್ಲಾಧ್ಯಕ್ಷರಾದ ಲಾಲಸಾಬ ಕೋರಬು, ತಳವಾರ ಸಮಾಜದ ಜಿಲ್ಲಾಧ್ಯಕ್ಷರಾದ ಅಶೋಕ ಗಡೇದ, ನ್ಯಾಯವಾದಿಗಳಾದ ನಾಮದೇವ ಹೊಸಮನಿ ಮುಂತಾದವರು ಇದ್ದರು.
ವರದಿ : ಉಸ್ಮಾನ ಬಾಗವಾನ (ಬಳಗಾನೂರ)
