ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಮತ್ತು ಸ್ವಚ್ಛತಾ ಕಾರ್ಯಗಳು ಸೇರಿದಂತೆ ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ಪ್ರಾಧಿಕಾರದ ವತಿಯಿಂದ ಪ್ಲಾಸ್ಟಿಕ್ ವಸ್ತುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಚೆಕ್ ಪೋಸ್ಟ್ ಸ್ಥಳಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಬೆಳಿಗ್ಗೆ ಸ್ವಾಮೀಜಿಗಳಾದ ಡಾ. ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮಿಗಳು ಹರಿಹರ, ಪುರುಷೋತ್ತಮ ಸ್ವಾಮಿಗಳು ಹೊಸದುರ್ಗ, ಈಶ್ವರಾನಂದಪುರಿ ಹೊಸದುರ್ಗ, ಸ್ವಾಮಿಗಳೊಡನೆ ಸ್ವಾಮಿಯ ದರ್ಶನ ಪಡೆದ ಅವರು ಬಳಿಕ ಮಲೆಮಹದೇಶ್ವರ ಬೆಟ್ಟ ಶ್ರೀ ಕ್ಷೇತ್ರಕ್ಕೆ ಹೋಗುವ ಎರಡು ಬದಿಯ ಸಿ.ಸಿ. ರಸ್ತೆ ಚರಂಡಿಗಳ ಕಾಮಗಾರಿಗಳು ಮತ್ತು ಶುಚಿತ್ವ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ ವಸತಿ ಗೃಹ ಬಳಿಯ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ವಾಹನಗಳ ಪಾರ್ಕಿಂಗ್ ಸ್ಥಳ, ಹಸಿರು ವನ ಪರಿಶೀಲನೆ ನಡೆಸಿದರು. ಅಲ್ಲಿ ಕಂಡ ಅಶುಚಿ ವ್ಯವಸ್ಥೆಯನ್ನು ಸರಿಪಡಿಸುವುಂತೆ ಇಲಾಖೆಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಮಲೆಮಹದೇಶ್ವರ ಬೆಟ್ಟ ದೇವಾಲಯದ ಮಹಾದ್ವಾರ ಮುಂಭಾಗ ಭಕ್ತಾದಿಗಳು ಬೀಡು ಬಿಡುವ ಮತ್ತು ತಂಗುವ ಆವರಣದಲ್ಲಿ ಶುಚಿತ್ವ, ನೈರ್ಮಲ್ಯ ಕಾಪಾಡಲು ಸೂಚಿಸಿದರು.
ಇಡಿ ಸರ್ಕಾರ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೆ ಕಟ್ಟಡದ ಉದ್ಘಾಟನೆ ಹಾಗೂ ಅತಿಥಿಗಳ ಆಥಿತ್ಯಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಾಳ ಬೆಟ್ಟ ಪ್ಲಾಸ್ಟಿಕ್ ನಿಷೇಧ ಚೆಕ್ ಪೋಸ್ಟ್ ಗೆ ಭೇಟಿ:
ಮಲೆ ಮಹದೇಶ್ವರ ತಾಳಬೆಟ್ಟದ ಅರಣ್ಯ ಪ್ರದೇಶದ ಒಳಗಡೆ ಪಾದಯಾತ್ರೆ ಮೂಲಕ ತೆರಳುವ ಹಾದಿಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಗೆ ತೆರಳಿ ಅಲ್ಲಿನ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಅರಣ್ಯ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿನ್ನಣ್ಣ, ಸಹಾಯಕ ಇಂಜಿನಿಯರ್ ಸೆಲ್ವ ಗಣಪತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಿಣ್ಣವೆಂಕಟ್, ಡಿ.ಕೆ ರಾಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಮುಖಂಡರುಗಳಾದ ಡಿ,ಆರ್ ಮಾದೇಶ್, ಸುರೇಶ್, ಗೋಪಾಲ್ ನಾಯಕ, ದೊಡ್ಡಸಿಗನಾಯಕ, ಬಂಡಳ್ಳಿ ಜೇಸಿಮ್ ಪಾಷಾ, ಭಷರತ್, ವಿಜಯ್ ಕುಮಾರ್, ಶಿವು, ವೆಂಕಟೇಶ್, ಪುಟ್ಟಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಉಸ್ಮಾನ್ ಖಾನ್
