ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು.
ಕ್ಲಸ್ಟರಿನ ಹನ್ನೊಂದು ಶಾಲೆಗಳಿಂದ ಆಗಮಿಸಿದ 100 ಕ್ಕೂ ಹೆಚ್ಚು ಚಿಣ್ಣರು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಬೆಳಿಗ್ಗೆ 10-30 ಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿಬಾಯಿ ಫಕೀರಗೌಡ ಪಾಟೀಲ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಮಾನ್ಯ ಶ್ರೀಮತಿ ಜಾಸ್ಮಿನ್ ಕಿಲ್ಲೆದಾರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ಎಫ್ ಎಲ್ ಎನ್ ಎಂದರೆ ಫಂಡಮೆಂಟಲ್ ಲಿಟರಸಿ ಅಂಡ್ ನ್ಯೂಮರಸಿ ಎಂಬುದು ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾದ ಸ್ಪಷ್ಟ ಓದು, ಶುದ್ಧ ಬರಹ, ಸರಳ ಲೆಕ್ಕಾಚಾರ ಸಾಮರ್ಥ್ಯವಾಗಿದೆ. ಯಾವ ಮಕ್ಕಳು ಸಾಮಾನ್ಯ ಕಲಿಕೆಯಲ್ಲಿ ಈ ಸಾಮರ್ಥ್ಯಗಳನ್ನು ಸಾಧಿಸಿಲ್ಲವೋ ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಚಟುವಟಿಕೆಯಾಧಾರಿತ ವಿಶೇಷ ಬೋಧನೆಯ ಮೂಲಕ ಕಲಿಸುವ ಪ್ರಕ್ರಿಯೆಯಾಗಿದೆ. ವರ್ಷದ ಉದ್ದಕ್ಕೂ ನಡೆದ ಈ ಪ್ರಕ್ರಿಯೆ ಈಗ ಅಂತ್ಯಗೊಂಡಿದ್ದು ಆ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಂತವರಾಗಿದ್ದು ಅಂಥವರಿಗೆ ವಿಶೇಷ ಸ್ಪರ್ಧೆಗಳನ್ನು ನಡೆಸಿ ಪ್ರೋತ್ಸಾಹಿಸುವ ಕಾರ್ಯಕ್ರಮವೇ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಸದಾಶಿವ ಎಸ್ ಗುಡಗುಂಟಿ BRC ಅವರು ಪ್ರಾಸ್ತಾವಿಕವಾಗಿ ತಾವು ನಿಧಾನ ಗತಿಯ ಕಲಿಕೆಯ ಮಕ್ಕಳು ಎಂಬ ಕೀಳರಿಮೆಯಲ್ಲಿದ್ದ ಮಕ್ಕಳಲ್ಲಿ ವಿಶೇಷ ಚಟುವಟಿಕೆಗಳ ಮೂಲಕ ಎಲ್ಲಾ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ನಾವು ಸಹ ಮುಂದಿದ್ದೇವೆ ಎಂಬ ಭಾವನೆಯನ್ನು ಹುಟ್ಟು ಹಾಕಿ ಸ್ವಯಂ ಪ್ರೇರಣೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಹಾಗೂ ಮಕ್ಕಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಕೀರ್ತಿ ಎಲ್ಲಾ ಶಾಲೆಗಳ ಗುರು ವೃಂದಕ್ಕೆ ಸಲ್ಲುತ್ತದೆ ಎಂದರು.
ಗಟ್ಟಿ ಓದು, ಕೈಬರಹ, ಮೆಮೊರಿ ಪರೀಕ್ಷೆ, ರಸಪ್ರಶ್ನೆಯಂತಹ ಏಳು ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದುಕೊಂಡರು. ಇಪ್ಪತ್ತಕ್ಕೂ ಹೆಚ್ಚು ಸಂಪನ್ಮೂಲ ಶಿಕ್ಷಕರು ಎಲ್ಲಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಲಿಕಾ ಹಬ್ಬದಲ್ಲಿ ಆಕರ್ಷಣೀಯವಾಗಿ ಎತ್ತಿನ ಬಂಡಿಯ ಅಲಂಕಾರ ಹಾಗೂ ವಿಶೇಷವಾಗಿ ಅತಿಥಿಗಳನ್ನು ಕುಂಭಮೇಳದೊಂದಿಗೆ ಸ್ವಾಗತಿಸಿದ್ದು ಮತ್ತು ಅಕ್ಷರ ಮರ ಆಕರ್ಷಣೀಯವಾಗಿದ್ದವು.
ಬಹುಮಾನ ವಿತರಣೆ ಹಾಗೂ ಸಮಾರೋಪ:
ಕೂಡಲಸಂಗಮ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಗೋವಿಂದಗೌಡ ಎಚ್ ಗೌಡರ ಇವರ ನೇತೃತ್ವದಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಹಂತದಲ್ಲಿ ಮಕ್ಕಳು ಅಮೋಘ ಸಾಧನೆ ಮಾಡಲು ಪ್ರಾಥಮಿಕ ಶಿಕ್ಷಣ ಅವರಿಗೆ ಭದ್ರ ಬುನಾದಿ ಆಗಬೇಕು. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲಿಕಾ ಶಕ್ತಿ ಉಂಟುಮಾಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಕೋವಿಡ್ ಕಾಲದಿಂದ ಮಕ್ಕಳ ಕಲಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು ಸರಕಾರ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ನಿಗದಿತ ಕಲಿಕಾ ಸಾಧನೆ ಮಾಡುವಲ್ಲಿ ವಿಫಲತೆ ಕಾಣುತ್ತಿದ್ದು, ಮಕ್ಕಳ ಹೆಸರು ಮಕ್ಕಳ ವಿಕಾಸಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ದುಡಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಸಂಗಮೇಶ ಪಾಟೀಲ್, ಶ್ರೀಮತಿ ಬಿ.ಬಿ ದೇವದುರ್ಗ, ಶ್ರೀ ರಮೇಶ ಕುಳಗೇರಿ ಶ್ರೀಮತಿ ವಿಜಯಲಕ್ಷ್ಮಿ ನಾಗಲೋಟಿಮಠ, ಶ್ರೀ ಸಿದ್ದು ಶೀಲವಂತರ, ಶ್ರೀ ಸಂಗಮೇಶ ಹೊಲದುರು, ಶ್ರೀ ಎಂ ಎನ್ ಗೌಡರ, ಶ್ರೀ ಜಿ ವೈ ಆಲೂರ, ಶ್ರೀ ಫಕೀರಗೌಡ ಪಾಟೀಲ, ಶ್ರೀ ಡಿ.ಬಿ ಹರದೊಳ್ಳಿ, ಶ್ರೀ ಸಂಗಣ್ಣ ಭದ್ರಶೆಟ್ಟಿ, ಶ್ರೀ ಮಹಾಂತೇಶ ಮೇಟಿ, ಶ್ರೀ ಅಪ್ಪಣ್ಣಿ ಕುಂದರಗಿ, ಶ್ರೀ ಸಂಗನಬಸಪ್ಪ ಬದ್ರಶೆಟ್ಟಿ, ಶ್ರೀ ಸಂಗಣ್ಣ ಕನಕಣ್ಣವರ, ಶ್ರೀ ನಿಂಗಪ್ಪ ಹಡಪದ, ಶ್ರೀ ನೀಲಪ್ಪ ಡೋಣಿ, ಶ್ರೀ ಗ್ಯಾನಪ್ಪ ಮೇಟಿ, ಶ್ರೀ ಹೆಚ್ ಬಿ.ಮಾದರ ಶಿಕ್ಷಕರು ಹಾಗೂ ಶ್ರೀಮತಿ ವಿದ್ಯಾಕನಕನ್ನವರ ಮತ್ತು ಕೂಡಲಸಂಗಮ ಕ್ಲಸ್ಟರ್ನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರ್ಥನೆ ಹಾಗೂ ಸ್ವಾಗತಿ ಗೀತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ವಿದ್ಯಾರ್ಥಿನಿಯರು ನಡೆಸಿಕೊಟ್ಟರು ಅತಿಥಿ ಮಹನೀಯರನ್ನು ಶ್ರೀ ಬಿ ಎಂ ಅಂಗಡಿ ಗುರುಗಳು ಸ್ವಾಗತಿಸಿದರು ಶ್ರೀ ಮುತ್ತು ಯ.ವಡ್ಡರ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ಎಂ ಹೆಚ್ ಪೂಜಾರಿ ಗುರುಗಳು ವಂದಿಸಿದರು.
