ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಶ್ರೀ ರೂಪ ರಹಿತ ಅಹಿಂಸಾ ಯೋಗೇಶ್ವರ ಮಾತಾ ಮಾಣಿಕೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 26 ರಿಂದ ಮಹಾಶಿವರಾತ್ರಿ ಉತ್ಸವ ಜರುಗಲಿದೆ ಎಂದು ಶ್ರೀ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ ಮಾತಾ ಮಾಣಿಕೇಶ್ವರಿ ಆಶ್ರಮ ಟ್ರಸ್ಟ್ ಯಾನಾಗುಂದಿ ಕಾರ್ಯದರ್ಶಿಗಳಾದ ಶಿವಯ್ಯ ಸ್ವಾಮಿ ಹಾಗೂ ಖಜಾಂಚಿ ಸಿದ್ರಾಮಪ್ಪ ಸಣ್ಣೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26 ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಮಹಾನ್ಯಾಸಪೂರ್ವಕ ಮಹಾರುದ್ರಾಭಿಷೇಕ , ಪಾದಕ ಪೂಜೆ , ಮಹಾ ಮಂಗಳಾರತಿ ಜರಗುವುದು, ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮಹಾಶಿವರಾತ್ರಿ ಉತ್ಸವ ಜರುಗುವುದು, 27 ರಂದು ಸಂಜೆ 7:00ಗೆ ಮಹಾರಥೋತ್ಸವ ಜರುಗಲಿದ್ದು, 28 ರಂದು ಬೆಳಗ್ಗೆ 9 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದೆ.
ಮಾರ್ಚ್ 10 ರಿಂದ 14ರ ವರೆಗೆ ಶ್ರೀಮಾತಾ ಮಾಣಿಕೇಶ್ವರಿ ಅಮ್ಮನವರ ಐದನೇ ಅವತಾರ ಉತ್ಸವ ಸಮಾರಂಭ ಜರುಗಲಿದೆ.
ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಲಿದ್ದು ಈ ಹಿಂದೆ ಜರುಗಿದ ಕೆಲ ಸಮಾರಂಭಗಳಲ್ಲಿ ಮಹಿಳೆಯರ ಒಡವೆಗಳು, ಚೈನ್ ಮತ್ತಿತರ ಕಳ್ಳತನ ಪ್ರಕರಣಗಳು ಹೆಚ್ಚು ಕಂಡು ಬಂದಿವೆ, ಆದ್ದರಿಂದ ಮಹಿಳೆಯರು ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಹಾಕಿಕೊಂಡು ಬರಬಾರದೆಂದು ಈ ಮೂಲಕ ಸೂಚಿಸಲಾಗಿದೆ.
ನಾಲ್ಕು ರಾಜ್ಯಗಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜನೆ ಅಲ್ಲದೇ ವಿಶೇಷ ಮಹಿಳಾ ಪೊಲೀಸ್ ಪೇದೆಗಳನ್ನು ನಿಯೋಜಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಆದ್ದರಿಂದ ಕರ್ನಾಟಕ ರಾಜ್ಯದಲ್ಲಿರುವ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲರೂ ಆಗಮಿಸಿ, ಮಹಾಶಿವರಾತ್ರಿ ಉತ್ಸವ ಪಲ್ಲಕ್ಕಿ ರಥೋತ್ಸವ ಹಾಗೂ ಅಮ್ಮನವರ ಐದನೇ ಅವತಾರ ಉತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರಲಾಗಿದೆ.
